ಬೆಂಗಳೂರು: ಬಿ.ಎಸ್.ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಈ ಹಿಂದೆ ಕೊಟ್ಟಿದ್ದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಷ್ಕರಣೆ ಮಾಡಿರುವ ಕಾರಣ ಕೆಲವು ಕಾಲೇಜುಗಳಲ್ಲಿನ ಕೋರ್ಸ್ ಗಳು ರದ್ದಾಗಿದ್ದು, ಆದ್ದರಿಂದ ಪ್ರವೇಶಕ್ಕೆ ಸೀಟು ಹಂಚಿಕೆಯಾಗಿರುವವರು ಮೊದಲ ಸುತ್ತಿನಲ್ಲಿ ಛಾಯ್ಸ್- 3 ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಲಹೆ ನೀಡಿದೆ.
ಒಟ್ಟು 11 ಕಾಲೇಜುಗಳ ಕೆಲವು ಕೋರ್ಸ್ ಗಳನ್ನು ವಿಶ್ವವಿದ್ಯಾಲಯ ಸೀಟ್ ಮ್ಯಾಟ್ರಿಕ್ಸ್ ನಿಂದ ತೆಗೆದುಹಾಕಿದೆ. ಹಾಗೆಯೇ ನಾಲ್ಕು ಕಾಲೇಜುಗಳಲ್ಲಿನ ಕೋರ್ಸ್ ಗಳ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಬಂದ ನಂತರ ವಿಶ್ವವಿದ್ಯಾಲಯ ಈ ತೀರ್ಮಾನ ಮಾಡಿರುವ ಕಾರಣ ಇಂತಹ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾದವರು ಛಾಯ್ಸ್-3 ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ.
ಬೆಂಗಳೂರಿನ ಕುರಾ, ಮಲ್ಲಿಗೆ, ನಸೀಮಾ, ಸೋಫಿಯಾ, ಸ್ಪರ್ಶ್, ಕೋಲಾರದ ಪ್ರಕೃತಿ, ಬೆಳಗಾವಿಯ ಶ್ರೀ ಗುರು, ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಥೆರಪಿ, ರಾಮನಗರದ ಐಕಾನ್, ಬಿಜಿಎಸ್, ತಿಪಟೂರಿನ ಮುದ್ರಾ ಕಾಲೇಜುಗಳಲ್ಲಿನ ಕೆಲವು ಕೋರ್ಸ್ ಗಳನ್ನು ಸೀಟ್ ಮೆಟ್ರಿಕ್ಸ್ ನಿಂದ ತೆಗದುಹಾಕಲಾಗಿದೆ. ಇನ್ನು ರಾಯಚೂರಿನ ಲಬುಬಾಯಿ ಬನ್ನಿತಾಬಾಯಿ ಬಂಡಾರಿ, ಮಂಗಳೂರಿನ ಮಂಗಳೂರು ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ತುಮಕೂರಿನ ಶ್ರೀ ಸಿದ್ಧಗಂಗಾ ಆಸ್ಪತ್ರೆ ಕಾಲೇಜು, ಮಣಿಪಾಲ್ ನ ಉಡುಪಿ ಕಾಲೇಜಿನ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಈ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾಗಿರುವವರು ಛಾಯ್ಸ್-3 ಆಯ್ಕೆ ಮಾಡಿಕೊಂಡು ಮುಂದಿನ ಸುತ್ತಿನಲ್ಲಿ ಇದೇ ಸೀಟುಗಳಿಗೆ ಇಚ್ಛೆ ದಾಖಲಿಸಬಹುದಾಗಿದೆ ವಿವರಿಸಿದೆ.