ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ.ಪಿ. ರಂಗನಾಥ್ ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಎ.ಪಿ ರಂಗನಾಥ್ ಹೇಳಿಕೆ: “ನಿನ್ನೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪತ್ರಕರ್ತರ ಮೇಲೆ ಗೂಂಡಾಗಳಿಂದ ನಡೆದ ಹಲ್ಲೆ, ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಹಾಗೂ ಶ್ರೀ ಮಂಜುನಾಥನ ನಿಜ ಭಕ್ತರಿಗೆ ತೀವ್ರ ಆಘಾತ ತಂದಿದೆ. ಸದರಿ ಘಟನೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದರೆ ತಪ್ಪಿಲ್ಲ.”
“ಧರ್ಮಸ್ಥಳದ ಸುತ್ತ ಮುತ್ತ ಡಿಜಿ, ಐಜಿ ದರ್ಜೆಯ ಅಧಿಕಾರಿಗಳ ನೇತೃತ್ವದ ವಿಶೇಷ ಪೊಲೀಸ್ ಪಡೆ ಬೀಡು ಬಿಟ್ಟಿದೆ, ಬೆಂಗಳೂರು ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಸುಮಾರು ೩೩೮ ವ್ಯಕ್ತಿ ಸಾಮಾಜಿಕ ಜಾಲ ತಾಣಗಳು ದಿನ ಪತ್ರಿಕೆಗಳ ವಿರುದ್ಧ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹಿಂಪಡೆದಿದೆ. ಈ ಎಲ್ಲಾ ಸಂಗತಿಗಳು ಸಮಾಜ ಘಾತುಕ ವ್ಯಕ್ತಿಗಳನ್ನು ಕೆರಳಿಸಿವೆ.”
“ಆದ್ದರಿಂದ ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿ ಮಾಡಿ ತಪ್ಪಿತಸ್ಥ ವ್ಯಕ್ತಿಗಳು ಸಂಚು ರೂಪಿಸಿದ ವ್ಯಕ್ತಿ ಮತ್ತು ಸಂಸ್ಥೆಗಳ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಿದ್ದೇವೆ” ಎಂದು ಎ.ಪಿ. ರಂಗನಾಥ್ ತಿಳಿಸಿದ್ದಾರೆ.