Education News

ರಾಜ್ಯ ಶಿಕ್ಷಣ ನೀತಿ ಆಯೋಗದಿಂದ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಶಿಫಾರಸ್ಸು

Share It

ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ಆಯೋಗ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣದ ಕುರಿತು ಅಧ್ಯಯನ ನಡೆಸಿ ಕೆಲ ಮಾಹಿತಿ ಸಂಗ್ರಹಿಸಿ ವರದಿ ನೀಡಿದ್ದು ಪ್ರಮುಖವಾಗಿ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸಲು ಶಿಫಾರಸ್ಸು ಮಾಡಿದೆ.

ಶುಕ್ರವಾರ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಶಿಕ್ಷಣ ನೀತಿ ಆಯೋಗವು ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ವರದಿ ಸಲ್ಲಿಸಿದ್ದು, ವರದಿಯಲ್ಲಿ ಮಹತ್ತರ ಕೆಲ ಅಂಶಗಳು ಉಲ್ಲೇಖಿಸಿದೆ. ಪ್ರಮುಖವಾಗಿ ಎಸ್‌ಇಪಿಯಲ್ಲಿ ದ್ವಿಭಾಷಾ ಸೂತ್ರದ ಶಿಕ್ಷಣದ ಶಿಫಾರಸ್ಸು ಮಾಡಿರುವ ಆಯೋಗ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಶಿಕ್ಷಣ ನೀಡಲು ಶಿಾರಸ್ಸು ಮಾಡಿದೆ. ಎಲ್ಲ ಬೋರ್ಡ್‌ಗಳಲ್ಲಿ 5ನೇ ತರಗತಿವರೆಗೆ ಮಾತೃಭಾಷೆಯಾದ ಕನ್ನಡವನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸಿದೆ ಹಾಗೂ 1ನೇ ತರಗತಿಗೆ ದಾಖಲಾತಿ ವಯಸ್ಸನ್ನು 6 ವರ್ಷಕ್ಕೆ ನಿಗದಿ ಮಾಡಿದ್ದು ಜತೆಗೆ 3 ತಿಂಗಳು ಹೆಚ್ಚು ಕಡಿಮೆಯಾದರೂ ದಾಖಲಾತಿಗೆ ಅವಕಾಶ ನೀಡಬೇಕು ಎಂದು ಸಮಿತಿ ತಿಳಿಸಿದೆ.

ಜೊತೆಗೆ ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಪಠ್ಯಕ್ರಮವನ್ನು ಅಭಿವೃದ್ದಿಸಬೇಕು. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಅವಲಂಬನೆಯನ್ನು ಕೊನೆಗೊಳಿಸಿ, ವಿಷಯಗಳನ್ನು ಸ್ಥಳೀಯಗೊಳಿಸಿ, ಗುತ್ತಿಗೆ/ಅತಿಥಿ ಶಿಕ್ಷಕರ ನೇಮಕಾತಿಗಳನ್ನು ನಿಲ್ಲಿಸುವಂತೆ ಶಿಫಾರಸ್ಸು ಮಾಡಿದೆ. ರಾಜ್ಯದ ಒಟ್ಟು ವೆಚ್ಚದಲ್ಲಿ ಶಿಕ್ಷಣದ ಪಾಲನ್ನು ಶೇ.30ಕ್ಕೆ ಹೆಚ್ಚಿಸಬೇಕು ಎನ್ನುವುದು ಸೇರಿದಂತೆ ಶಿಕ್ಷಣದ ಸಮಗ್ರ ಅಭಿವೃದ್ಧಿಗೆ ಹಲವು ಸಲಹೆಗಳನ್ನು ನೀಡಿದೆ.


Share It

You cannot copy content of this page