ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾರಿ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹಾಸನ, ಕೊಡಗು,ಬೆಳಗಾವಿ, ಹಾವೇರಿ, ವಿಜಯಪುರದಲ್ಲಿ ಮುಂದಿನ 3 ದಿನ ಆರೆಂಜ್ ಅಲರ್ಟ್ ಕೊಡಲಾಗಿದೆ. ಬೀದರ್, ಧಾರವಾಡ, ಗದಗ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರಿನಲ್ಲಿ ಮುಂದಿನ 2 ದಿನ ಯೆಲ್ಲೋ ಅಲರ್ಟ್ ಇರಲಿದೆ. ಬೆಂಗಳೂರು ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 48 ಗಂಟೆ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಕೂಡಿದ ಸಾಧಾರಣ ಮಳೆ ಬೀಳಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಮತ್ತು 20 ಡಿ.ಸೆ. ದಾಖಲಾಗಲಿದೆ ಎಂದು ಹೇಳಿದೆ.
ಆಂಧ್ರಪ್ರದೇಶ ಮತ್ತು ಓರಿಸ್ಸಾದ ಕರಾವಳಿ ತೀರದಲ್ಲಿ ವಾಯಭಾರ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 4 ದಿನ ರಭಸದಿಂದ ಮಳೆಯಾಗಲಿದೆ. ಕರಾವಳಿ, ಮಲೆನಾಡು ವ್ಯಾಪ್ತಿಯಲ್ಲಿ ಮಳೆ ತೀವ್ರತೆ ತುಸು ಜೋರಾಗಿ ಇರಲಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ವರ್ಷಧಾರೆಯಾಗಲಿದೆ ಎಂದು ತಿಳಿಸಿದೆ.
ಕ್ಯಾಸಲ್ ರಾಕ್ ನಲ್ಲಿ ಅತಿ ಹೆಚ್ಚು ಮಳೆ:
ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತರ ಕನ್ನಡದ ಕ್ಯಾಸಲ್ ರಾಕ್ 18, ಜಗಲಬೆಟ್ 14, ಚಿಕ್ಕಮಗಳೂರಿನ ಶೃಂಗೇರಿ 13, ಕಮ್ಮರಡಿ 13, ಜಯಪುರ 12, ಕೊಪ್ಪ 11, ಶಿವಮೊಗ್ಗದ ಆಗುಂಬೆ 12, ದಕ್ಷಿಣ ಕನ್ನಡದ ಧರ್ಮಸ್ಥಳ 10, ಉಡುಪಿಯ ಸಿದ್ದಾಪುರ 7 ಸೆಂಮೀ ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ:
ಗಂಟೆಗೆ 60 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿರುವ ಕಾರಣ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.