News

ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಅಂಗೀಕಾರ

Share It

ಬೆಂಗಳೂರು: 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು. ಡಿಸಿಎಂ ಡಿ.ಕೆ. ಶಿವಕುಮಾರ್ ಸದನದಲ್ಲಿ ಈ ವಿಧೇಯಕವನ್ನು ಮಂಡಿಸಿದರು. ವಿರೋಧ ಪಕ್ಷದ ನಾಯಕರು, ಶಾಸಕರು ಚರ್ಚೆ ನಡೆಸಿದ ನಂತರ ವಿಧಯೆಕಕ್ಕೆ ಅನುಮೋದನೆ ನೀಡಲಾಯಿತು.

2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕದ ಪ್ರಸ್ತಾವನೆ ವೇಳೆ ಮಾತನಾಡಿದ ಶಿವಕುಮಾರ್, ಮಸೂದೆ ಅಂಗೀಕಾರಗೊಂಡಿದ್ದರೂ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಹೀಗಾಗಿ ಈ ಮಸೂದೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.

ಈಗ ಜಾರಿಯಲ್ಲಿರುವ ಕಾಯ್ದೆ ಅನುಸಾರ ಜಿಬಿಎ ಅಡಿಯಲ್ಲಿ ರಚಿಸಲಾಗಿರುವ ಪಾಲಿಕೆಗಳ ವಿಚಾರದಲ್ಲಿ ಪ್ರಾಧಿಕಾರವು ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿಲಾಗಿದೆ. ಹೀಗಾಗಿ ಈ ಅಂಶವನ್ನು ಪ್ರಸ್ತುತ ತಿದ್ದುಪಡಿ ವಿಧೇಯಕದಲ್ಲಿ ತೆಗೆದು ಹಾಕಲಾಗಿದೆ. ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಿಲ್ಲ. ಪಾಲಿಕೆಗಳು ಅದರ ಪಾಡಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ. ಪಾಲಿಕೆಗಳ ಕಾರ್ಯಚಟುವಟಿಕೆಯಲ್ಲಿ ಜಿಬಿಎ ಹಸ್ತಕ್ಷೇಪ ಇರುವುದಿಲ್ಲ ಎಂಬ ಸ್ಪಷ್ಟನೆ ನೀಡಲು ಈ ತಿದ್ದುಪಡಿ ತರಲಾಗಿದೆ ಎಂದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸದಿದ್ದರೂ ಮುಂದೆ ಯಾವುದೇ ರೀತಿಯ ಗೊಂದಲಗಳು ಇರಬಾರದು ಎಂಬ ಕಾರಣಕ್ಕೆ ಈ ತಿದ್ದುಪಡಿ ತರುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವ ಮೇಯರ್ ಹಾಗೂ ಪಾಲಿಕೆ ಸದಸ್ಯರಿಗೆ ಸಂಪೂರ್ಣ ಅಧಿಕಾರ ಇರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.


Share It

You cannot copy content of this page