ಬೆಂಗಳೂರು: ನಾವು ಅವರ ಪರವೂ ಇಲ್ಲ, ಇವರ ಪರವೂ ಇಲ್ಲ. ನ್ಯಾಯದ ಪರ ಮಾತ್ರ ಇದ್ದೇವೆ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ಹೇಳುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶನಿವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳದ ಪ್ರಕರಣದಲ್ಲಿ ಸಾಕ್ಷಿ ದೂರುದಾರನ ಬಂಧನವಾಗಿದೆ. ಬಿಜೆಪಿಯವರು ಇದುವರೆಗೂ ಏನೂ ಮಾತನಾಡಿರಲಿಲ್ಲ. ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ನಾನು ಷಡ್ಯಂತ್ರ ವಿಚಾರ ಪ್ರಸ್ತಾವನೆ ಮಾಡಿದ ನಂತರ ಮಾತನಾಡುತ್ತಿದ್ದಾರೆ ಎಂದರು.
ಜನಾಧಿಕಾರ ಯಾತ್ರೆಯಲ್ಲಿ ಭಾಗಿ:
ಬಿಹಾರಕ್ಕೆ ತೆರಳುತ್ತಿರುವ ಬಗ್ಗೆ ಕೇಳಿದಾಗ, ಬಿಹಾರದಲ್ಲಿ ಕಾಂಗ್ರೆಸ್ ಜನಾಧಿಕಾರ ಯಾತ್ರೆ ನಡೆಯುತ್ತಿದೆ. ಅದನ್ನು ಪಕ್ಷದ ಶಾಸಕರು ನೋಡಬೇಕು ಎಂದರು, ಅದಕ್ಕಾಗಿ ತೆರಳುತ್ತಿದ್ದೇವೆ. ಮುಖ್ಯಮಂತ್ರಿಗಳನ್ನೂ ಆಹ್ವಾನ ಮಾಡಿದ್ದು ಅವರೂ ಸಹ ಇನ್ನೊಂದು ದಿನ ಹೋಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
