ಬೆಂಗಳೂರು: ವಿಧಾನ ಪರಿಷತ್ತಿನ 156ನೇ ಅಧಿವೇಶನ ಆ.11 ರಿಂದ 22ರವರೆಗೆ ಒಟ್ಟು ಒಂಬತ್ತು ದಿನಗಳಲ್ಲಿ 54.25 ಗಂಟೆ ನಡೆದು ಶುಕ್ರವಾರ ಸಂಜೆ ಪ್ರತಿಭಟನೆಯೊಂದಿಗೆ ಮುಕ್ತಾಯ ಕಂಡಿದೆ.
ಸದನದಲ್ಲಿ ಮೊದಲ ದಿನ ಇತ್ತೀಚೆಗೆ ನಿಧನರಾದ 11 ಗಣ್ಯರಿಗೆ ಸಂತಾಪ ವ್ಯಕ್ತಪಡಿಸಲಾಗಿತ್ತು. ಅಧಿವೇಶನದಲ್ಲಿ 1,431 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 135 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳನ್ನಾಗಿ ಅಂಗೀಕರಿಸಲಾಗಿದೆ. ಅವುಗಳಲ್ಲಿ 95 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ. ಲಿಖಿತವಾಗಿ ಉತ್ತರಿಸುವ ಒಟ್ಟು 1,296 ಪ್ರಶ್ನೆಗಳ ಪೈಕಿ 789ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಕೊಡಲಾಗಿದೆ.
ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಒಟ್ಟು 37 ವಿಧೇಯಕಗಳಿಗೆ ಪರಿಷತ್ತು ಸಹಮತಿ ನೀಡಿದೆ. ಶೂನ್ಯ ವೇಳೆ ಪ್ರಸ್ತಾವನೆಗೊಂಡ ಒಟ್ಟು 71 ಸೂಚನೆಗಳ ಪೈಕಿ 26 ಸೂಚನೆಗಳಿಗೆ ಉತ್ತರಿಸಲಾಗಿದೆ ಹಾಗೂ 19 ಸೂಚನೆಗಳಿಗೆ ಉತ್ತರಗಳನ್ನು ಮಂಡಿಸಲಾಗಿದೆ. ಜೊತೆಗೆ ಮೂರು ವಿಧೇಯಕಗಳನ್ನು ಹಿಂಪಡೆಯಲಾಗಿದೆ.