ಚಿತ್ರದುರ್ಗ: ಜಾತಿ ಶ್ರೇಷ್ಠತೆಯ ವ್ಯಸನದ ಮನುಸ್ಮೃತಿಯ ಘರ್ ವಾಪ್ಸಿಗೆ ನಿರಂತರ ಷಡ್ಯಂತ್ರ ನಡೆಯುತ್ತಿದ್ದು ಇದು ಸಾಧ್ಯವಾಗದಂತೆ ತಡೆದು ನಿಲ್ಲಿಸಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವಾಗಿದೆ. ಈ ಕಾರಣಕ್ಕೇ ಸಂವಿಧಾನದ ಕುತ್ತಿಗಿಗೇ ಕೈ ಹಾಕಲಾಗುತ್ತಿದೆ. ಇದಕ್ಕೆ ಸುದ್ದಿ ಮಾಧ್ಯಮ ಮೂಕಸಾಕ್ಷಿಯಾಗಿರುವುದು ಅಪಾಯಕಾರಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.
ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಪ್ರಚಾರ ಇಲಾಖೆ, ಎಸ್.ಸಿ/ಎಸ್.ಟಿ ಸಂಪಾದಕರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹೊತ್ತಿನ ಬಹಳ ಪತ್ರಕರ್ತರ ಕೈಯಲ್ಲಿ ವಿಚಾರ, ವಿಮರ್ಷೆಗಿಂತ ಹೆಚ್ಚಾಗಿ ಪೆಟ್ರೋಲ್, ಬೆಂಕಿಪೊಟ್ಟಣವೇ ಹೆಚ್ಚಾಗಿದೆ. ಕಡ್ಡಿಗೀರುವ ಅವಕಾಶಕ್ಕಾಗಿ ಕಾಯುತ್ತಿರುವಂತೆ ಕಾಣುತ್ತಾರೆ. ಪ್ರಜಾಪ್ರಭುತ್ವದ ಪ್ರಾಣ ಪಕ್ಷಿ ಸುದ್ದಿ ಸಂಸ್ಥೆಗಳ ಕೈಯಲ್ಲಿದೆ. ಪ್ರಾಣ ಉಳಿಸುವುದು, ಬಿಡುವುದು ಅವರಿಗೆ ಬಿಟ್ಟಿದೆ. ಸುದ್ದಿ ಮಾಧ್ಯಮದ ಆತ್ಮ ಆಗಿರುವ ವಾಕ್ ಸ್ವಾತಂತ್ರ್ಯ ಮತ್ತು ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯವೇ ಅಂಬೇಡ್ಕರ್ ದೃಷ್ಟಿಕೋನದ ಆತ್ಮವೂ ಆಗಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೌಲ್ಯವೂ ಆಗಿದೆ. ಇವತ್ತಿನ ಸುದ್ದಿ ಮಾಧ್ಯಮಗಳ ರಚನೆ ಮತ್ತು ಆಚರಣೆಯಲ್ಲಿ ಜಾತ್ಯತೀತತೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ, ಅಂಬೇಡ್ಕರ್ ದೃಷ್ಟಿಕೋನದ ಮರ್ಯಾದೆಗೇಡು ಹತ್ಯೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ಎರಡು ತದ್ವಿರುದ್ದವಾದ ಬೆಳವಣಿಗೆಗಳು ಅತೀ ವೇಗವಾಗಿ ನಡೆಯುತ್ತಿವೆ. ಒಂದು ಅಂಬೇಡ್ಕರ್ ಅವರ ವಿಗ್ರಹಗಳನ್ನು ಅತೀ ಹೆಚ್ಚು ನಿರ್ಮಿಸುತ್ತಲೇ ಅಂಬೇಡ್ಕರ್ ಅವರ ವಿಚಾರಗಳನ್ನು ಕೊಲ್ಲುವ ಪ್ರಕ್ರಿಯೆ ಕೂಡ ಹೆಚ್ಚು ವೇಗ ಪಡೆದುಕೊಂಡಿದೆ. ವಿಗ್ರಹಗಳನ್ನು ಸ್ಥಾಪಿಸಿ, ವಿಚಾರಗಳನ್ನು ಕೊಲ್ಲುವ ಈ ವಿದ್ಯಮಾನಕ್ಕೆ ಸುದ್ದಿ ಮಾಧ್ಯಮ ಮೂಕಸಾಕ್ಷಿಯಾಗಿದೆ. ಇಡೀ ದೇಶದಲ್ಲಿ ಅತೀ ಹೆಚ್ಚು ಅಂಬೇಡ್ಕರ್ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಆದರೆ ವಿಶ್ವದಲ್ಲಿ ಅತೀ ಹೆಚ್ಚು ಮಾನ್ಯತೆ ಪಡೆದ ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೂಪಗೊಳಿಸುತ್ತಾ, ಸಂವಿಧಾನದ ತಲೆ ಕತ್ತರಿಸುವುದು, ಕೈ ಮುರಿಯುವುದು, ಮಸಿ ಬಳಿಯುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದ ಎನ್ನುವ ಮೌಲ್ಯವನ್ನು ಕೀಳಬೇಕು ಎನ್ನುವ ಕೂಗಿನ ಹಿಂದೆ ಇರುವುದೂ ಕೂಡ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸುವ ವಿಕೃತ ಮನಸ್ಥಿತಿಯೇ ಆಗಿದೆ ಎಂದು ವಿಶ್ಲೇಷಿಸಿದರು.
ತಮ್ಮ 65 ವರ್ಷಗಳ ಜೀವಿತಾವಧಿಯಲ್ಲಿ ಅರ್ಧಕ್ಕೂ ಹೆಚ್ಚು ಆಯಸ್ಸನ್ನು ಅಂಬೇಡ್ಕರ್ ಅವರು ಪತ್ರಕರ್ತರಾಗಿ, ಸಂಪಾದಕರಾಗಿ, ಲೇಖಕರಾಗಿ, ಬರಹಗಾರರಾಗಿ ಕಳೆದಿದ್ದಾರೆ. ಸದ್ಯ ಸುಮಾರು 25,000 ಪುಟದಷ್ಟು ಅಂಬೇಡ್ಕರ್ ಅವರ ಬರಹಗಳು ಲಭ್ಯವಿದೆ. ಸುಮಾರು ಐದು ವರ್ಷಗಳ ಕಾಲ ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನೂ ಅಭ್ಯಾಸ ಮಾಡಿ, ಅಧ್ಯಯನ ನಡೆಸಿ ಬುದ್ಧ ಮತ್ತು ಅವನ ಧರ್ಮ ಕೃತಿಯನ್ನು ಬರೆಯುವಾಗಲೇ ತಾವು ಮಾಡಿಟ್ಟಿದ್ದ ನೋಟ್ಸ್ ಗಳ ರಾಶಿಯ ಮೇಲೇ ಕೊನೆಯುಸಿರೆಳೆದರು. ತಮ್ಮ ಇಡೀ ಜೀವಮಾನವನ್ನು ಪ್ರಬುಧ್ಧ ಭಾರತದ ನಿರ್ಮಾಣಕ್ಕಾಗಿ ನಿರಂತರವಾಗಿ ನಿಷ್ಠುರ ಸಂಪಾದಕೀಯಗಳನ್ನು, ಲೇಖನಗಳನ್ನು ಬರೆದರು. ಆ ನಿಷ್ಠುರತೆ ಇವತ್ತಿನ ಸುದ್ದಿ ಮಾಧ್ಯಮಗಳಲ್ಲಿ ಅಳಿಸುತ್ತಿದೆ. ಒಂದು ಕಡೆ ಮಾಧ್ಯಮಗಳಲ್ಲಿ ದಲಿತ ಸಮುದಾಯದ ಪ್ರತಿನಿಧ್ಯವೇ ಇಲ್ಲ ಎನ್ನುವ ಅಧ್ಯಯನ ವರದಿಗಳು ಬಂದಿವೆ. ನಿರ್ಣಾಯಕ ಸ್ಥಾನಗಳಲ್ಲಿ ಮಹಿಳೆಯರಿಗೆ, ದಲಿತರಿಗೆ ಸುದ್ದಿ ಸಂಸ್ಥೆಗಳು ನಿಷೇದ ಹೇರಿವೆ ಎನ್ನುವ ವರದಿಗಳೂ ಇವೆ. ಈ ತಾರತಮ್ಯ ಸುದ್ದಿಗಳ, ಸಂಗತಿಗಳ ಆಯ್ಕೆಯ ಮೇಲೆ ಪರಿಣಾಮ ಬೀರುತ್ತವೆ. ಮಾತ್ರವಲ್ಲದೆ ಪತ್ರಿಕೆಗಳನ್ನು ರೂಪಿಸುವ ಮತ್ತು ಸುದ್ದಿಗಳನ್ನು ಗ್ರಹಿಸುವುದರಲ್ಲಿ ಮತ್ತು ಮಂಡಿಸುವುದರಲ್ಲೂ ಅಂಬೇಡ್ಕರ್ ದೃಷ್ಟಿಕೋನ ಕಾಣೆಯಾಗಿದೆ ಎಂದರು.