ಮೈಸೂರು: ದಸರಾ ನಾಡ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಆದ್ದರಿಂದ ಇದನ್ನು ಸಾಹಿತಿ, ಹೋರಾಟಗಾರ್ತಿ ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದು ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟಕರ ಆಯ್ಕೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯಲ್ಲಿ ನನಗೆ ಅಧಿಕಾರ ನೀಡಲಾಗಿತ್ತು. ನಾನು ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡಬೇಕೆಂದು ತೀರ್ಮಾನ ಮಾಡಿದೆ. ಹಿಂದೆಯೂ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದ್ದಾರೆ. ದಸರಾ ನಾಡ ಹಬ್ಬ, ಸಾಂಸ್ಕೃತಿಕ ಆಚರಣೆಯಾಗಿದೆ. ನಾಡ ಹಬ್ಬವನ್ನು ಇಂಥ ಧರ್ಮದವರೇ ಉದ್ಘಾಟಿಸಬೇಕೆಂದು ಇಲ್ಲ. ನಾಡ ಹಬ್ಬ ಎಲ್ಲರಿಗೂ ಹಬ್ಬವೇ. ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನರಿಗೆ ಕೂಡ ಹಬ್ಬವಾಗಿದೆ. ಮಹಾರಾಜರ ಆಡಳಿತ ಇಲ್ಲದಿರುವಾಗ ಹೈದರಾಲಿ, ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸುತ್ತಿದ್ದರು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ದಸರಾ ಆಚರಿಸಿದ್ದಾರೆ. ಇದೊಂದು ಧರ್ಮಾತೀತ, ಜಾತ್ಯಾತೀತ ಹಬ್ಬವಾಗಿದೆ ಎಂದರು.
ಕರ್ನಾಟಕದಲ್ಲಿ ಬುಕರ್ ಪ್ರಶಸ್ತಿ ಪಡೆದ ಸಾಹಿತಿಗಳು ಬಹಳ ಕಡಿಮೆ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವ ಬಗ್ಗೆ ಧರ್ಮ ಧರ್ಮಾಂಧರು ಮಾತ್ರ ಮಾತನಾಡುತ್ತಾರೆ. ಅವರಿಗೆ ಇತಿಹಾಸ ತಿಳಿದಿಲ್ಲ, ಇತಿಹಾಸವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಾರೆಯೇ ಹೊರತಾಗಿ ಜಾತ್ಯಾತೀತವಾಗಿ ಮಾತನಾಡುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಬಿಜೆಪಿಯವರದ್ದು ಎಲ್ಲದರಲ್ಲೂ ರಾಜಕೀಯ:
ಬಿಜೆಪಿಯವರು ಧರ್ಮಸ್ಥಳಕ್ಕೆ ಧರ್ಮಯಾತ್ರೆ ಕೈಗೊಳ್ಳುತ್ತಿರುವ ಬಗ್ಗೆ ಮಾತನಾಡಿ ಬಿಜೆಪಿಯವರು ಎಲ್ಲದರಲ್ಲಿಯೂ ರಾಜಕೀಯ ಮಾಡುತ್ತಾರೆ. ಯಾತ್ರೆ ಹೋದರೆ ಹೋಗಲಿ. ಎಸ್ಐಟಿ ರಚನೆಯನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಸತ್ಯ ಹೊರ ಬರಬೇಕೆಂಬ ಕಾರಣದಿಂದ ಎಸ್ಐಟಿ ರಚನೆ ಮಾಡಲಾಗಿದೆ. ಇಲ್ಲದಿದ್ದರೆ ಧರ್ಮಸ್ಥಳದ ಬಗ್ಗೆ ಯಾವಾಗಲೂ ತೂಗುಗತ್ತಿ ಇರುತಿತ್ತು. ಈ ಸಂದೇಹವನ್ನು ಹೋಗಲಾಡಿಸಲು ರಚಿಸಲಾಗಿದೆ. ಫೀರ್ಯಾದುದಾರ ನ್ಯಾಯಾಲಯದ ಮುಂದೆ ಹೋಗಿ 164 ಹೇಳಿಕೆಯನ್ನು ನೀಡಿದ್ದರು. ಅನೇಕ ಸಂಘ ಸಂಸ್ಥೆಗಳು ಎಸ್ಐಟಿ ರಚಿಸಬೇಕೆಂದು ಒತ್ತಾಯವನ್ನು ಮಾಡಿದ್ದವು. ಬಿಜೆಪಿಯವರು ಕೂಡ ಇದನ್ನು ಸ್ವಾಗತಿಸಿದ್ದರು. ಈಗ ಮಾತ್ರ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಧರ್ಮ ಗೊತ್ತಿಲ್ಲ ಎಂದರು.