ಬೆಂಗಳೂರು: ಇಂದಿನ ಯುವ ಪೀಳಿಗೆಗೆ ತಮ್ಮ ಮೆದುಳು ಮತ್ತು ಜ್ಞಾನ ಶತ್ರುಗಳಾಗಿ ಪರಿಣಮಿಸಿವೆ. ಮನುಕುಲ ಈ ಮಟ್ಟಿಗೆ ಬಂದಿರುವುದಕ್ಕೆ ಲಕ್ಷಾಂತರ ವರ್ಷಗಳೇ ಹಿಡಿದಿದ್ದರೂ ಇದನ್ನು ಮನಗಾಣದೇ ಅತಿರೇಕದ ವರ್ತನೆಗೆ ಮುಂದಾಗುತ್ತಿದ್ದಾರೆ. ಈ ವಿಚಾರವಾಗಿ ವಿಮರ್ಶಾತ್ಮಕ ಚಿಂತನೆಯ ಅಗತ್ಯವಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಪ್ರತಿಪಾದಿಸಿದರು.
ರಾಜರಾಜೇಶ್ವರಿ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಯಲ್ಲಿ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ ಆಯೋಜಿಸಿದ್ಧ “ಬಡ್ಡಿ ಬೆಂಚ್ ಕನ್ವರ್ಸೇಷನ್” ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯರಂತೆ ನಾವು ನಂಬಿರುವುದೇ ಸತ್ಯ ಉಳಿದವು ಅಸತ್ಯ ಎಂದು ನಮ್ಮ ಸಂಸ್ಕೃತಿ ಹೇಳಿಲ್ಲ. ಇಲ್ಲಿನ ಮಣ್ಣು, ಸಂಸ್ಕೃತಿ, ಧರ್ಮ ಎಂದೂ ಒಂದನ್ನೇ ಸರಿ ನಮ್ಮ ನಂಬಿಕೆಯೇ ಸರಿ ಉಳಿದವು ತಪ್ಪು ಎಂದೂ ಪ್ರತಿಪಾದಿಸಿಲ್ಲ. ನಮ್ಮ ನಾಗರೀಕತೆ ಹತ್ತಾರು ಸಾವಿರ ವರ್ಷಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಾಪುರುಷರನ್ನು ಕಂಡಿದೆ, ಆದರೆ ಯಾರನ್ನೂ ಕಣ್ಣು ಮುಚ್ಚಿಕೊಂಡು ಒಪ್ಪಿಕೊಂಡಿಲ್ಲ. ಎಲ್ಲವನ್ನೂ ಎಲ್ಲರನ್ನೂ ಪ್ರಶ್ನಿಸಿ ಸತ್ಯವನ್ನು ಹೆಕ್ಕಿ ತೆಗೆದಿದೆ. ಈ ವಿಚಾರಗಳನ್ನು ಮನಗಂಡು ಯುವಕರು ವ್ಯಕ್ತಿತ್ವ ವಿಕಸನಕ್ಕೆ ಮುಂದಾದರೆ ಉತ್ತಮ ಸಮಾಜವನ್ನು ಕಟ್ಟಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ನಾಳಿನ ನಾಗರೀಕರು ಇಂದಿನ ಮಕ್ಕಳಾಗಿದ್ದು, ಆದರೆ ಅವರ ಪಾಲನೆ ಪೋಷಣೆ ಮೊದಲಿಗಿಂತ ಹೆಚ್ಚು ಕಷ್ಟದಾಯಕವಾಗಿದೆ. ಈಗಿನ ಪೀಳಿಗೆ ಕೆಲವ ತಂದೆ ತಾಯಿ ಅಥವಾ ಪೋಷಕರ ಪ್ರಭಾವಕ್ಕೆ ಒಳಗಾಗದೆ ಹತ್ತು ಹಲವು ವಿಧದ ವಿಚಾರಗಳನ್ನು ತಿಳಿದುಕೊಳ್ಳಲು ಮುಂದಾಗಿದ್ದಾರೆ. ಈಗಿನ ಕಾಲಮಾನದಲ್ಲಿ ತಂತ್ರಜ್ಞಾನದ ಪ್ರಭಾವ ಹೆಚ್ಚಾಗಿ, ಹಿರಿಯರ ಮೂಲಕವೇ ವಿಷಯಗಳ ತಿಳಿಯಬೇಕೆಂದಿಲ್ಲ, ಇದರಿಂದ ಸಮಸ್ಯೆಗಳು ಉಲ್ಬಣವಾಗುತ್ತಿವೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪೋಷಕರು ಮಕ್ಕಳು ತಮ್ಮ ಮಾತನ್ನು ಕೇಳುತ್ತಿಲ್ಲ ಹಿರಿಯರಿಗೆ ಗೌರವಿಸುತ್ತಿಲ್ಲ ಎಂದು ದೂರುವುದನ್ನು ಬಿಟ್ಟು ಅವರನ್ನು ಸಂಸ್ಕಾರವಂತರನ್ನಾಗಿ ಮಾಡುವೆಡೆಗೆ ಯೋಚಿಸಬೇಕು ಇಲ್ಲಿನ ಧರ್ಮ ಸಂಸ್ಕೃತಿಯ ಕಾರಣದಿಂದಾಗಿ ಕೆಟ್ಟ ಪ್ರಭಾವಗಳು ಇನ್ನೂ ಅಷ್ಟಾಗಿ ಮಕ್ಕಳಲ್ಲಿ ಕಂಡುಬರದಾಗಿದೆ. ಆದರೆ ಪರಿಸ್ಥಿತಿಗಳ ಕೆಟ್ಟ ಪ್ರಭಾವದಿಂದ ಅಥವಾ ತಂತ್ರಜ್ಞಾನದ ತಪ್ಪು ಬಳಕೆಯಿಂದ ಅವರ ಮನಸ್ಥಿತಿ ಹದಗೆಡುವ ಮೊದಲು ಹಿರಿಯರು ಎಚ್ಚೆತ್ತು ಅಂತರಂಗವನ್ನು ಶುದ್ಧೀಕರಿಕೊಳ್ಳುವ ಮೂಲಕ ಮಕ್ಕಳಿಗೆ ಸದ್ಗುಣಗಳನ್ನು ಮತ್ತು ಸಂಸ್ಕಾರವನ್ನು ಬೆಳೆಸುವೆಡೆಗೆ ಮಾತ್ರ ಗಮನ ನೀಡಬೇಕು. ಉಳಿದ ಅನಾವಶ್ಯಕ ವಿಚಾರಗಳ ಕುರಿತು ಯೋಚಿಸುವ ಅಗತ್ಯವಿಲ್ಲ ಎಂದು ಸದ್ಗುರು ಒತ್ತಿ ಹೇಳಿದರು.
ಸಂವಾದದ ಸಮನ್ವಯಕಾರರಾಗಿ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯ ಮುಖ್ಯಸ್ಥೆ ಐಶ್ವರ್ಯ ಡಿಕೆಎಸ್ ಹೆಗಡೆ ಕಾರ್ಯನಿರ್ವಹಿಸಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಪೋಷಕರು, ಮಕ್ಕಳು ಹಾಗೂ ನಾಗರೀಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.