Education News

ರಾಜ್ಯಮಟ್ಟದ ಉತ್ತಮ ಶಿಕ್ಷಕ, ಶಾಲೆ ಪ್ರಶಸ್ತಿ ಪ್ರಕಟ

Share It

ಬೆಂಗಳೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ರಾಜ್ಯಮಟ್ಟದ ಉತ್ತಮ ಶಿಕ್ಷಕ, ಉತ್ತಮ ಶಾಲೆ ಪ್ರಶಸ್ತಿಗಳು ಪ್ರಕಟವಾಗಿದ್ದು, ಈ ಬಾರಿ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರು, ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಇಬ್ಬರು ಹಾಗೂ ಉಪನ್ಯಾಸಕರ ಪ್ರಶಸ್ತಿಗೆ ಎಂಟು ಮಂದಿ ಆಯ್ಕೆಯಾಗಿದ್ದಾರೆ.

ಶಿಕ್ಷಕರಾದ ಉಡುಪಿ ಜಿಲ್ಲೆಯ ಶಿರೂರಿನ ಪಿ.ಎಂ. ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಚಂದ್ರನಾರಾಯಣ ಬಿಲ್ಲವ, ತುಮಕೂರು ಜಿಲ್ಲೆಯ ದೊಡ್ಡ ಬೀರನಕೆರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಬಿ.ಶಿವಣ್ಣ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಹೊಸಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಎಂ.ಹರೀಶ್ ಕುಮಾರ್, ಬೆಂಗಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಎಚ್.ಆರ್.ಗೋವಿಂದರಾಜು, ದಕ್ಷಿಣ ಕನ್ನಡ ಜಿಲ್ಲೆ ಅಂಬ್ಲಮೊಗರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎ.ಜಗದೀಶ ಶೆಟ್ಟಿ ಸೇರಿದಂತೆ ಇನ್ನೂ 15 ಮಂದಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೌಢ ಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ, ಯಾದಗಿರಿ ಜಿಲ್ಲೆಯ ಶಹಪೂರದ ಆದರ್ಶ ವಿದ್ಯಾಲಯದ ಹಣಮಂತ್ರಾಯ ಸೋಮಪುರ, ಶಿರಸಿಯ ಸರ್ಕಾರಿ ಪ್ರೌಢ ಶಾಲೆಯ ಗೋಪಾಲ ಕೆ.ನಾಯ್ಕ, ಚಿಕ್ಕಮಗಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಯಶವಂತ ಕುಮಾರ ಸಿ.ಜಿ, ಬೆಳಗಾವಿಯ ಸರ್ಕಾರಿ ಪ್ರೌಢ ಶಾಲೆಯ ರಾಜಶೇಖರ ಕಲ್ಯಾಣ ರಗಟಿ, ಉತ್ತರ ಕನ್ನಡದ ಸರ್ಕಾರಿ ಪ್ರೌಢ ಶಾಲೆಯ ಶ್ರೀ‘ರ ಗಣೇಶ ಶೇಟ್ ಸೇರಿದಂತೆ ಇತರರು ಆಯ್ಕೆಯಾಗಿದ್ದಾರೆ.

ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ಆನಂದ ಶಿವಪ್ಪಾ ಕೋಳಿ ಮತ್ತು ಮೈಸೂರು ಜಿಲ್ಲೆಯ ಕೃಷ್ಣಯ್ಯ ಎಚ್.ಕೆ. ಆಯ್ಕೆಯಾಗಿದ್ದರೆ, ಉಪನ್ಯಾಸಕ ಪ್ರಶಸ್ತಿಗೆ ಕೆ.ಆರ್. ಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸ ದೇವರಾಜು ಆರ್. ಶಿವಮೊಗ್ಗ ಜಿಲ್ಲೆಯ ಡಾ. ಸ್ರರಾಜ ಜಿ, ಡಾ. ಲಿಂಗಾನಂದ ಕೆ. ಗವಿಮರ್, ಜ್ಯೋತಿ ಸಿ.ಎಂ., ಬಸವರಾಜ ಎಸ್ ಜಲವಾಡಿ, ಡಾ. ಲೋಕೇಶ್ ಕೆ. ವಿಜಯಲಕ್ಷ್ಮಿ ಪಂಡಪ್ಪ ಪೆಟ್ಟೂರು, ವೆಂಕಟಾಚಲ ಸಿ.ವಿ. ಆಯ್ಕೆಯಾಗಿದ್ದಾರೆ. ಈ ಎಲ್ಲ ಪ್ರಶಸ್ತಿಗಳು ತಲಾ 25 ಸಾವಿರ ರೂ.ಗಳ ನಗದು ಬಹುಮಾನವನ್ನು ಹೊಂದಿವೆ.

ಇನ್ನು ಮಾಜಿ ಶಿಕ್ಷಣ ಸಚಿವ ಎಚ್.ಇ. ಗೋವಿಂದೇಗೌಡ ಅವರ ಹೆಸರಿನಲ್ಲಿ ಉತ್ತಮ ಶಾಲಾ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವೀರರಾಘವನಪಾಳ್ಯದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಯ್ಕೆಯಾಗಿವೆ.


Share It

You cannot copy content of this page