News

ಒಂದು ದೇಶ ಒಂದು ಚುನಾವಣೆ ಈ ಕಾಲಘಟ್ಟದ ಅಗತ್ಯವಾಗಿದೆ: ವಿಜಯೇಂದ್ರ

Share It

ಬೆಂಗಳೂರು: ಒಂದು ದೇಶ ಒಂದು ಚುನಾವಣೆ ಈ ಕಾಲಘಟ್ಟದಲ್ಲಿ ಅಗತ್ಯವಾಗಿದೆ. ಇದರಿಂದ ರಾಜ್ಯ ಮತ್ತು ದೇಶಕ್ಕೆ ಒಳಿತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದರು.

ಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಒಂದು ದೇಶ ಒಂದು ಚುನಾವಣೆ ಕುರಿತ ವಿದ್ಯಾರ್ಥಿ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆಡಳಿತ ಸುಧಾರಣೆ ಜೊತೆಗೇ ಸಾವಿರಾರು ಕೋಟಿ ಹಣವನ್ನು ಉಳಿಸುವ ಕ್ರಮ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಟ್ಟ ವಿಚಾರಗಳು ಬಹಳ ಬೇಗ ಜನರನ್ನು ತಲುಪುತ್ತವೆ. ಒಳ್ಳೆಯ ವಿಚಾರ ಜನರನ್ನು ತಲುಪಲು ಸ್ವಲ್ಪ ತಡ ಆಗುತ್ತದೆ. ಆದ್ದರಿಂದ ನಾವು ನಮ್ಮ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಈ ಒಳ್ಳೆಯ ವಿಚಾರದ ಕುರಿತು ಜಾಗೃತಿ ಮೂಡಿಸಬೇಕು. ವಿವಿಧ ಕ್ಷೇತ್ರಗಳ ಸಮಾಜದ ಗಣ್ಯರ ಮಧ್ಯೆ ಚರ್ಚೆ ಮಾಡಬೇಕು. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಡುವೆ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.

ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವದಲ್ಲಿ ಭಾರತವು ಅತ್ಯಂತ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಕೆಲವೇ ಕೆಲವು ವರ್ಷಗಳಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಆದರೆ ಇದನ್ನು ಈ ದೇಶದ ಮಣ್ಣಿನ ಋಣ, ಅನ್ನದ ಋಣ ಪಡೆದ ರಾಹುಲ್ ಗಾಂಧಿ, ನಮ್ಮ ಮುಖ್ಯಮಂತ್ರಿಯವರಿಗೆ ಸಹಿಸಲು ಆಗುತ್ತಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.


Share It

You cannot copy content of this page