ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಶೀಘ್ರವೇ ನೈತಿಕ ಶಿಕ್ಷಣದ ಪಠ್ಯ ಆರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸೌದಧ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‌ನಲ್ಲಿ ಸದಸ್ಯರು ನಾಲ್ಕು ದಿನ ಮೌಲ್ಯ ಶಿಕ್ಷಣದ ಕುರಿತು ಚರ್ಚೆ ನಡೆಸಿದ್ದರು. ಇದನ್ನು ಮನಗಂಡು ನಮ್ಮ ಶಾಲಾ ಶಿಕ್ಷಣದಲ್ಲಿ ನೈತಿಕ ಶಿಕ್ಷಣವು ವಿಶೇಷ ಪಠ್ಯದ ರೂಪದಲ್ಲಿ ಜಾರಿಗೆ ತರಲಿದ್ದೇವೆ. ಈ ಪಠ್ಯಕ್ಕೆ ಪರೀಕ್ಷೆಗಳು ಇರುವುದಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ತಿಳಿಸಿದರು.
ಒಂದರಿಂದ ಹತ್ತನೇ ತರಗತಿಯರೆಗೆ ಶಾಲಾ ಮಕ್ಕಳು, ಸಂವಿಧಾನದ ಪೀಠಿಕೆ ಓದುತ್ತಿದ್ದಾರೆ. ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲ ಪಠ್ಯ ಪುಸ್ತಕಗಳಲ್ಲಿ ಮಹಾತ್ಮಾ ಗಾಂಧಿಯವರ ಮಹತ್ವದ ಮಾತುಗಳು ಮತ್ತು ಚಿತ್ರವನ್ನು ಅಳವಡಿಸಿದ್ದೇವೆ ಎಂದರು.
164 ಪ್ರೌಢ ಶಾಲೆಗಳಿಗೆ ಅನುಮೋದನೆ:
ಈವರೆಗೆ 307 ಕೆಪಿಎಸ್ ಶಾಲೆಗಳಿದ್ದವು. ಆದರೆ, ಗುರುವಾರ ನಡೆದ ಸಚಿವ ಸಂಪುಟದಲ್ಲಿ 800 ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಅನುಮೋದನೆ ದೊರೆತಿದೆ. ಈಗಾಗಲೇ ನಾವು ಈ ವರ್ಷ 164 ಪ್ರೌಢ ಶಾಲೆಗಳಿಗೆ ಅನುಮೋದನೆ ನೀಡಿದ್ದೇವೆ. ಇನ್ನು ಒಂದು ವಾರದಲ್ಲಿ 50 ಪಿಯು ಕಾಲೇಜುಗಳಿಗೆ ಮಂಜೂರಾತಿ ನೀಡುತ್ತೇವೆ. ಈಗ 4 ಸಾವಿರ ಪ್ರಿ ಪ್ರೈಮರಿ ಶಾಲೆಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಆರಂಭದಲ್ಲೇ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗಲು ಅನುಕೂಲವಾಗುತ್ತದೆ ಎಂದು ಹೇಳಿದರು.
18,500 ಶಿಕ್ಷಕರ ನೇಮಕ:
ಕಲ್ಯಾಣ ಕರ್ನಾಟಕ, ರಾಜ್ಯದ ಇತರ ಭಾಗಗಳಲ್ಲಿರುವ ಶಿಕ್ಷಕರ ಖಾಲಿ ಹುದ್ದೆ ಮತ್ತು ಪಿಯು ಉಪನ್ಯಾಸಕರು ಸೇರಿದಂತೆ 18,500 ಶಿಕ್ಷಕರ ನೇಮಕ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಮಧು ಬಂಗಾರಪ್ಪ ಭರವಸೆ ನೀಡಿದರು.