ಬೆಂಗಳೂರು: ಸಾವಿರಾರು ಜನರನ್ನು ಪ್ರೇರೇಪಿಸಿದ ರಾಷ್ಟ್ರಪುರುಷರಾದ ದೀನದಯಾಳ ಉಪಾಧ್ಯಾಯರು ತಮ್ಮ ವ್ಯಕ್ತಿತ್ವ, ಕರ್ತೃತ್ವ, ಸಾಧನೆ, ಚಿಂತನೆಯ ಮೂಲಕ ಆದರ್ಶದ ದೀಪಸ್ತಂಭದಂತಿದ್ದರು. ಅವರ ಬದುಕೇ ಗಂಗಾಪ್ರವಾಹವಾಗಿತ್ತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ- ಬೆಂಗಳೂರು ಮಹಾನಗರದ ವತಿಯಿಂದ ಜೆಪಿನಗರದ ಆರ್ ವಿ ಡೆಂಟಲ್ ಕಾಲೇಜಿನಲ್ಲಿ ನಡೆದ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ 109ನೇ ವರ್ಷದ ಜಯಂತಿಯ ನಿಮಿತ್ತ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಯಂಸೇವಕ ಎಂಬ ವಿಶೇಷವಾದ ಕಲ್ಪನೆ ಇಂದು ಸಹಜವಾಗಿದೆ. ಯಾವ ಸಂಘವೂ ಯಾರನ್ನೂ ನಿರ್ಮಾಣ ಮಾಡುವುದಿಲ್ಲ, ಬದಲಾಗಿ ಇರುವವರನ್ನು ಸೇರಿಸಿಕೊಂಡು ಸಂಘಟನೆಯಾಗುತ್ತದೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಯಂಸೇವಕರ ನಿರ್ಮಾಣ ಮಾಡುವ ಸಂಘಟನೆಯಾಗಿದೆ. ಅಂತಹ ಶ್ರೇಷ್ಠ, ಆದರ್ಶ, ಪ್ರೇರಣಾದಾಯಿ ಸಂಘಟನೆಯ ಸ್ವಯಂಸೇವಕರ ದಿನವನ್ನು ದೀನ ದಯಾಳ ಉಪಾಧ್ಯಾಯರಿಗೆ ಸಮರ್ಪಿಸಲಾಗಿದೆ. ಅವರನ್ನು ಚಿಂತಕರಾಗಿ, ದಾರ್ಶನಿಕರಾಗಿ, ಆದರ್ಶ ರಾಜಕಾರಣಿಯಾಗಿ ನೋಡಲಾಗುತ್ತದೆ. ಅಂತಹ ಆಯಾಮಗಳು ರೂಪುಗೊಂಡಿರುವುದು ಸ್ವಯಂಸೇವಕತ್ವದ ಆಧಾರದಲ್ಲಿಯೇ ಎನ್ನುವುದು ವಿಶೇಷವಾಗಿದೆ ಎಂದು ಹೇಳಿದರು.
ನಿಸ್ವಾರ್ಥ ಭಾವದಿಂದ, ತನುಮನಧನದಿಂದ ಸಮಯವನ್ನು ಸಂಘಕಾರ್ಯಕ್ಕಾಗಿ ತೆಗೆದಿಟ್ಟು ಈ ರಾಷ್ಟ್ರಕ್ಕಾಗಿ ಕೆಲಸ ಮಾಡುವವನು ಸ್ವಯಂಸೇವಕರಾಗಿದ್ದಾರೆ. ಅದೇ ಮಾದರಿಯಲ್ಲಿ ದೀನ ದಯಾಳರು ಸ್ವಯಂಸೇವಕನಾಗಿ ತಮಗೆ ಸಾಧ್ಯವಾದಷ್ಟು ಕೆಲಸ ಮಾಡಿದ್ದಲ್ಲ, ಸಂಘ ಹೇಳಿದ ಪ್ರತಿಯೊಂದು ಕೆಲಸವನ್ನೂ ಪರಿಶ್ರಮದಿಂದ ಮಾಡಿದವರಾಗಿದ್ದಾರೆ. ದೇಶದ ಬಗ್ಗೆ ಅವರಿಗಿದ್ದ ಕಳಕಳಿ, ಸಂವೇದನೆಯ ಮೂಲಕ ಭಾರತದೊಂದಿಗೆ ತಾದಾತ್ಮ್ಯರಾಗಿದ್ದವರು ಅವರಾಗಿದ್ದರು ಎಂದು ನುಡಿದರು.
ಭಾರತದ ಉನ್ನತಿಗೆ ಇವತ್ತಿನ ಯುವಪೀಳಿಗೆ ಕೆಲಸ ಮಾಡದೇ ಇನ್ಯಾರು ಮಾಡಬೇಕು ಎನ್ನುವುದು ದೀನ ದಯಾಳರ ನಿಲುವಾಗಿತ್ತು. ತಮ್ಮ ಯೌವನದಲ್ಲಿ ಅವರು ಮನಸ್ಸು ಮಾಡಿದ್ದರೆ ಅಂತರಾಷ್ಟ್ರೀಯ ಸ್ತರದ ವಿದ್ವತ್ತಿನ ಮೂರ್ತಿ ಆಗಬಹುದಿತ್ತು. ಆದರೆ ದೇಶದ ಅಗತ್ಯತೆಯ ಕಾರಣಕ್ಕೆ ತಮ್ಮ ಬದುಕನ್ನು ದೇಶಕ್ಕಾಗಿಯೇ ಮುಡಿಪಾಗಿಟ್ಟರು. ಭಾರತದ ಏಳಿಗೆ ಒಂದೇ ಅವರ ಜೀವನದ ಗುರಿಯಾಗಿತ್ತು ಎಂದು ನುಡಿದರು.
ಜನಸಂಘಕ್ಕೆ ವೈಚಾರಿಕ ಆಧಾರವನ್ನು ಗಟ್ಟಿಗೊಳಿಸಿದವರು ದೀನದಯಾಳ ಉಪಾಧ್ಯಾಯರಾಗಿದ್ದಾರೆ. ಇತಿಹಾಸವನ್ನು ಹೇಗೆ ನೋಡಬೇಕು ಎನ್ನುವುದನ್ನು ತಿಳಿಸಿದವರು ಅವರಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಚುನಾವಣೆಗಳನ್ನು ಸೋತರೂ ರಾಜಕೀಯ ಕ್ಷೇತ್ರದಲ್ಲಿ ಧ್ಯೇಯನಿಷ್ಠೆಗೆ ಅವರು ರಾಜಿಯಾಗಲಿಲ್ಲ. ಈ ಕಾರಣಕ್ಕಾಗಿ ಸೈದ್ಧಾಂತಿಕ ವಿರೋಧಿಗಳನ್ನೂ ಪ್ರಭಾವಿಸಿದ್ದರು. ಭಾರತದ ಮಣ್ಣಿನ ವಿಚಾರದ ಆಧಾರಿತವಾಗಿ ರಾಜಕಿಯ ಕ್ಷೇತ್ರದಲ್ಲಿ ಭಾರತದ ಏಳಿಗೆಗಾಗಿ ಬೇಕಾದಂತಹ ಏಕಾತ್ಮ ಮಾನವ ದರ್ಶನವೆಂಬ ಹೊಸದೊಂದು ಚಿಂತನೆಯನ್ನು ಕೊಟ್ಟವರು ದೀನ ದಯಾಳರಾಗಿದ್ದರು ಎಂದರು.
ಕಾರ್ಯಕರ್ತನಾದವನು ಸಾತ್ವಿಕ, ಮುಕ್ತ, ನಿರಹಂಕಾರಿ, ಜಯಪರಾಜಯಗಳಲ್ಲಿ ಸ್ಥಿತ ಪ್ರಜ್ಞೆಯನ್ನು ಉಳ್ಳವನಾಗಿರಬೇಕು ಎಂದು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ಅದಕ್ಕೆ ಅನ್ವರ್ಥವಾಗಿ ಬದುಕಿದವರು ದೀನ ದಯಾಳ ಉಪಾಧ್ಯಾಯರಾಗಿದ್ದಾರೆ. ಸ್ವಯಂಸೇವಕನ ದೃಷ್ಟಿ ಎಲ್ಲರನ್ನೂ ಜೋಡಿಸುವಂತಹದ್ದು. ಸಮಾಜದ ಎಲ್ಲರೂ ನಮ್ಮವರೇ, ಯಾರೂ ದ್ವೇಷಿಗಳಲ್ಲ, ವಿರೋಧಿಗಳಲ್ಲ ಎನ್ನುವುದನ್ನು ದೀನದಯಾಳರು ತಮ್ಮ ವಿನೀತ, ವಿಶುದ್ಧ ಜೀವನದ ಮೂಲಕ ತಿಳಿಸಿಕೊಟ್ಟರು ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಸಂಘಚಾಲಕ ಮಿಲಿಂದ ಗೋಖಲೆ, ಸಹಸರಕಾರ್ಯವಾಹ ಮುಕುಂದ ಸಿ ಆರ್, ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಮತ್ತಿತರರು ಭಾಗವಹಿಸಿದ್ದರು.