ಬೆಂಗಳೂರು: ರಾಜ್ಯ ಸರ್ಕಾರದ ಅವಿವೇಕಿತನದ ನಿರ್ಧಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಕೋಟ್ಯಾಂತರ ಭಕ್ತರ ಭಕ್ತಿ, ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕೋಟ್ಯಂತರ ಭಕ್ತರಿರುವ ಧರ್ಮಸ್ಥಳ ಪವಿತ್ರ ಕ್ಷೇತ್ರದ ಕುರಿತು ಬೀದಿಯಲ್ಲಿ ಹೋಗುವವನು ಹೇಳಿಕೆ ನೀಡಿದ್ದಾನೆಂದು, ಅದನ್ನು ಆಧಾರವಾಗಿ ಇಟ್ಟುಕೊಂಡು ಎಸ್‍ಐಟಿ ರಚಿಸಿದ್ದಾರೆ. ಇದರ ನಡುವೆ ಅಪಪ್ರಚಾರ ಆಗಿದೆ. ಹಾನಿಗೆ ಯಾರು ಬೆಲೆ ಕಟ್ಟಲು ಸಾಧ್ಯ. ಮುಖ್ಯಮಂತ್ರಿಗಳು ತಾವು ಮಾಡಿದ್ದೇ ಸರಿ ಎಂಬಂತೆ ಬಿಂಬಿಸುತ್ತಿದ್ದು, ಇದು ಸರಿಯಲ್ಲ ಎಂದು ನುಡಿದರು.
ದಾವಣಗೆರೆಯಲ್ಲಿ ಕೆಲವು ದುಷ್ಕರ್ಮಿಗಳು, ದೇಶದ್ರೋಹಿಗಳು ದಲಿತರ ಮನೆ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಟೀಕಿಸಿದರು. ಉತ್ತರ ಕರ್ನಾಟಕದ ಜನರು, ರೈತರು ಅತಿವೃಷ್ಟಿಯಿಂದ ಪರದಾಡುತ್ತಿದ್ದಾರೆ, ಕಂಗಾಲಾಗಿದ್ದಾರೆ. ಬಡವರು ಮನೆ ಕಳೆದುಕೊಂಡಿದ್ದಾರೆ. ರಾಜ್ಯ ಸರಕಾರ ಕಣ್ಮುಚ್ಚಿ ಕೂತಿದೆ ಎಂದು ಆಕ್ಷೇಪಿಸಿದರು.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ ಕೇಂದ್ರ ಸರಕಾರದ ಎನ್‍ಡಿಆರ್‍ಎಫ್ ಮಾರ್ಗದರ್ಶನಕ್ಕಿಂತ ಹೆಚ್ಚಿನ ಪರಿಹಾರ ಕೊಟ್ಟಿತ್ತು. ರಾಜ್ಯ ಸರಕಾರದಿಂದಲೂ ಅವರು ಪರಿಹಾರ ನೀಡಿದ್ದರು. ಆದರೆ, ಸಿದ್ದರಾಮಯ್ಯ ಕೇಂದ್ರ ಸರ್ಕಾರ ಪರಿಹಾರ ನೀಡಲಿ ಎಂದು ಕೈಕಟ್ಟಿ ಕುಳಿತಿದ್ದಾರೆ ಎಂದು ಟೀಕಿಸಿದರು.
ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 36ಕ್ಕೂ ಹೆಚ್ಚು ಜನರ ಸಾವಿನ ದುರ್ಘಟನೆ ಅತ್ಯಂತ ದುಃಖಕರವಾಗಿದೆ. ಮಹಿಳೆಯರು, ಮಕ್ಕಳು ಸಾವನ್ನಪ್ಪಿದ್ದು ಬಹಳ ನೋವಿನ ಸಂಗತಿಯಾಗಿದೆ. ಕರ್ನಾಟಕದಲ್ಲಿ ಈಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಇನ್ನೂ ಕಣ್ಮುಂದೆ ಇದೆ. ಈ ಘಟನೆ ನಡೆಯಬಾರದಿತ್ತು. ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.
ಜಾತಿ ಜನಗಣತಿ ಬಹಿಷ್ಕಾರದ ಕುರಿತು ಪಕ್ಷದಿಂದ ನಿರ್ಧಾರ ಮಾಡಿಲ್ಲ. ಪಕ್ಷದ ಹಿರಿಯರು ಕುಳಿತು ಚರ್ಚಿಸುತ್ತಿದ್ದೇವೆ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಉಲ್ಲೇಖಿಸಲು ಸ್ಪಷ್ಟ ತೀರ್ಮಾನ ಮಾಡಿರುವುದಾಗಿ ಹೇಳಿದರು.