News

ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಬದಲಾಗಿದೆ: ರಣದೀಪ್‌ ಸುರ್ಜೇವಾಲ

Share It

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಭರವಸೆಗಳಾಗಿ ಉಳಿಯದೆ, ಇಂದು ಕೋಟ್ಯಂತರ ಜನರ ದೈನಂದಿನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿವೆ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಪ್ರಕಟಣೆಯ ಮೂಲಕ ಮಾಹಿತಿ ನೀಡಿರುವ ಅವರು, ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಪ್ರಮುಖ ಸಾಧನಗಳಾಗಿ ಹೊರಹೊಮ್ಮಿವೆ. ಉದಾಹರಣೆಗೆ, ರಾಮನಗರದ ಫಲಾನುಭವಿ ಬಿ.ಕೆ. ತುಳಸಿ ನವರಾತ್ರಿಯ ಆಯುಧಪೂಜೆ ದಿನ ಗೃಹಲಕ್ಷ್ಮಿ ಹಣದಿಂದ 13 ಸಾವಿರ ರೂಪಾಯಿ ಮೌಲ್ಯದ ವಾಷಿಂಗ್ ಮಿಷನ್ ಖರೀದಿಸುವ ಮೂಲಕ ಯೋಜನೆಯ ಸದ್ಬಳಕೆಯನ್ನು ಮಾಡಿರುವುದು ಈ ಕ್ರಾಂತಿಗೆ ಒಂದು ಜೀವಂತ ಸಾಕ್ಷಿಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಪ್ರತಿ ಮನೆಯ ಯಜಮಾನಿಯ ಖಾತೆಗೆ ಮಾಸಿಕವಾಗಿ ಹಣ ಜಮಾವಣೆಯಾಗುವ ಗೃಹಲಕ್ಷ್ಮಿ ಯೋಜನೆಯು, ಮಹಿಳೆಯರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ. ಸಣ್ಣ ಉಳಿತಾಯಕ್ಕೆ ದಾರಿ ಮಾಡಿಕೊಟ್ಟಿದೆ. ಈ ಹಣ ಕೇವಲ ಖರ್ಚುಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಉತ್ಪಾದಕ ಆಸ್ತಿಗಳನ್ನು ಸೃಷ್ಟಿಸಲು ನೆರವಾಗುತ್ತಿದೆ ಎಂದಿದ್ದಾರೆ.

ರಾಮನಗರ ಟೌನ್‌ನ ಬಿ.ಕೆ. ತುಳಸಿ ಅವರೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಗೃಹಿಣಿಯಾದ ತುಳಸಿ ಅವರು, ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮೊದಲು ಮಕ್ಕಳಿಗೆ ಸೈಕಲ್ ಕೊಡಿಸಿ, ನಂತರ ವಾಷಿಂಗ್ ಮಿಷನ್ ಖರೀದಿಸಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.


Share It

You cannot copy content of this page