ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸವಾಗುತ್ತದೆ. ಈ ಬಗ್ಗೆ ಮಾತನಾಡುವುದು ಪಕ್ಷಕ್ಕೆ ಹಾನಿ ಮಾಡಿದಂತೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನೆಡೆದ ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಸದ್ಯ ಯಾವ ಅಧಿಕಾರ ಹಂಚಿಕೆ ವಿಚಾರ ಇಲ್ಲ. ಈ ಬಗ್ಗೆ ಯಾರಿಗೂ ಮಾತನಾಡುವ ಹಕ್ಕಿಲ್ಲ. ಶಾಸಕ ರಂಗನಾಥ್ ಸೇರಿದಂತೆ ಈ ವಿಚಾರವಾಗಿ ಯಾರೆಲ್ಲಾ ಮಾತನಾಡಿದ್ದಾರೋ ಅವರಿಗೆ ನೋಟೀಸ್ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರಿಗೆ ಸೂಚಿಸಿದ್ದೇನೆ. ಈ ವಿಚಾರವಾಗಿ ಚರ್ಚೆ ಮಾಡಬಾರದು ಎಂದು ಸ್ವತಃ ನಾನೇ ಹೇಳುತ್ತಿದ್ದೇನೆ. ನಿನ್ನೆ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದರೂ ಕೆಲವು ಮಾಧ್ಯಮಗಳು ಬೇರೆ ರೀತಿ ಬರೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೇಳಿರುವ ಮಾತು ಅಂತಿಮ. ಅದರ ಮೇಲೆ ಈ ವಿಚಾರವಾಗಿ ಯಾರೂ ಚರ್ಚೆ ಮಾಡುವಂತಿಲ್ಲ ಎಂದು ತಿಳಿಸಿದರು.
ಯಾರು ಈ ವಿಚಾರವಾಗಿ ಚರ್ಚೆ ಮಾಡುತ್ತಾರೋ ಅವರು ಪಕ್ಷಕ್ಕೆ ಡ್ಯಾಮೇಜ್ ಮಾಡಿದಂತೆ. ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆ, ನನ್ನ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆ ಎಂದು ಕಿಡಿಕಾರಿದರು.
ಶಿಸ್ತು ಇಲ್ಲದಿದ್ದರೆ ಪಕ್ಷ ಉಳಿಯುವುದಿಲ್ಲ:
ಇದಕ್ಕೂ ಮುನ್ನ ನೆಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕೂಡ ಮಾತನಾಡಿ, ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಮಾಡಿರುವ ಶಿವರಾಮೇಗೌಡ, ಶಾಸಕ ರಂಗನಾಥ್ ಅವರಿಗೂ ನೋಟೀಸ್ ನೀಡುವಂತೆ ನಿರ್ದೇಶನ ನೀಡಿದ್ದೇನೆ. ಈ ವಿಚಾರದಲ್ಲಿ ಮಾತನಾಡಿದರೆ ಜಿ.ಸಿ ಚಂದ್ರಶೇಖರ್ ಅವರಿಗೂ ನೋಟೀಸ್ ನೀಡುವಂತೆ ಹೇಳಿದ್ದೇನೆ. ನಮ್ಮಲ್ಲಿ ಶಿಸ್ತು ಇಲ್ಲವಾದರೆ ಪಕ್ಷ ಉಳಿಯುವುದಿಲ್ಲ ಎಂದು ತಿಳಿಸಿದರು.