ಬೆಂಗಳೂರು: ರಸ್ತೆ ಕಾಮಗಾರಿಗಳ ವೇಳೆ ವೆಟ್ ಮಿಕ್ಸಿಂಗ್ ವಿಧಾನ ಬಳಸಿಕೊಳ್ಳಲಾಗಿದೆ. ಕೆಲವೊಂದು ತುರ್ತು ಸಂದರ್ಭದಲ್ಲಿ ಮಳೆಯಲ್ಲೂ ಡಾಂಬರು ಹಾಕುವುದಕ್ಕೆ ಈ ವಿಧಾನ ಬಳಕೆ ಮಾಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರದ ನಿವಾಸದ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಗರದಾದ್ಯಂತ ರಾತ್ರಿಯೆಲ್ಲಾ ಜೋರಾಗಿ ಮಳೆ ಸುರಿದಿದೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಎಲ್ಲಿಯೂ ಅವಘಡಗಳು ನಡೆದ ಸುದ್ದಿಗಳು ವರದಿಯಾಗಿಲ್ಲ. ಒಂದಷ್ಟು ಕಡೆ ಮಾತ್ರ ನೀರಿನ ಹರಿವಿಗೆ ಅಡಚಣೆ ಉಂಟಾಗಿದೆ ಎಂದರು.
ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಿದ ಡಿಸಿಎಂ:
ನಂತರ ಬೆಂಗಳೂರಿನ ಉದ್ಯಾನವನಗಳಲ್ಲಿ ನಾಗರೀಕರು ಹಾಗೂ ವಾಯು ವಿಹಾರಿಗಳ ಧ್ವನಿ ಆಲಿಸಲು ವಿನೂತನವಾಗಿ ರೂಪಿಸಿರುವ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಶನಿವಾರ ಲಾಲ್ ಬಾಗ್ ಉದ್ಯಾನದಲ್ಲಿ ಜನಸಾಮಾನ್ಯರ ಜತೆ ಹೆಜ್ಜೆ ಹಾಕಿದರು. ಅವರ ಅಹವಾಲು ಆಲಿಸಿದರು, ಸಲಹೆಗಳನ್ನು ಪಡೆದರು. ಸಂವಾದ ನಡೆಸಿದರು, ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು.