News

2035ರ ವೇಳೆಗೆ ಭಾರತ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲಿದೆ: ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್

Share It

ಬೆಂಗಳೂರು: 2035ರ ವೇಳೆಗೆ ಭಾರತ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ತಿಳಿಸಿದರು.

ಗುರುವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯ ಕಚೇರಿ ಅಂತರಿಕ್ಷ ಭವನದಲ್ಲಿ ಎಮರ್ಜಿಂಗ್ ಸೈನ್ಸ್, ಟೆಕ್ನಲಾಜಿ ಮತ್ತು ಇನ್ನೋವೆಷನ್ ಕಾಂಕ್ಲೇವ್ ಕುರಿತ ವಿಡಿಯೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ನಮ್ಮ ದೇಶದ ಉಪಗ್ರಹಗಳ ಸಂಖ್ಯೆ ದುಪ್ಪಟ್ಟುಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಹವಾಮಾನ, ರಕ್ಷಣೆ, ಕೃಷಿ ಸೇರಿದಂತೆ ಹಲವು ವಲಯಗಳಿಗೆ ನಿಖರ ಮಾಹಿತಿ ದೊರೆಯಲಿದೆ ಎಂದರು.

2020ರ ಬಾಹ್ಯಾಕಾಶ ನೀತಿಗೆ ಮೊದಲು ಅಂತರಿಕ್ಷ ಕ್ಷೇತ್ರದಲ್ಲಿ ಕೇವಲ ಬೆರಳೆಣಿಕೆಯಷ್ಟು ನವೋದ್ಯಮಗಳಿದ್ದವು. ಆದರೆ ಕೇಂದ್ರ ಸರ್ಕಾರದ ನವ ನೀತಿಗಳಿಂದ ಸಂಖ್ಯೆ ಈಗ 300ಕ್ಕೂ ಹೆಚ್ಚಾಗಿದೆ. ಇಸ್ರೋದೊಂದಿಗೆ ಇಂದು 500ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಬಾಹ್ಯಾಕಾಶ ತಂತ್ರಜ್ಞಾನಗಳ ಕುರಿತ ಎಮರ್ಜಿಂಗ್ ಸೈನ್ಸ್, ಟೆಕ್ನಲಾಜಿ ಇನ್ನೋವೆಷನ್ ಕಾಂಕ್ಲೇವ್ ನ. 3 ರಿಂದ 5ರವರೆಗೆ ಹೊಸದಿಲ್ಲಿಯ ಭಾರತ ಮಂಟಪದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಮೋದಿ ಅವರ ಆಶಯದಂತೆ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಈಡೇರಿಸಲು ಈ ಸಮ್ಮೇಳನ ಸಹಕಾರಿಯಾಗಲಿದೆ ಎಂದು ಹೇಳಿದರು.

ನಾವೀನ್ಯತೆ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ 39 ಇಲಾಖೆಗಳು, ಸಂಸ್ಥೆಗಳು, ನವೋದ್ಯಮಿಗಳು, ಕೈಗಾರಿಕೋದ್ಯಮಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದು, ವಿವಿಧ ದೇಶಗಳ ಪ್ರತಿನಿಧಿಗಳು ಇರಲಿದ್ದಾರೆ. 3 ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಕ್ವಾಂಟಮ್ ತಂತ್ರಜ್ಞಾನ, ಗಗನಯಾನ, ನವೋದ್ಯಮಗಳ ಆವಿಷ್ಕಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಡಾ. ವಿ. ನಾರಾಯಣನ್ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಬಾಹ್ಯಾಕಾಶ ಸಚಿವಾಲಯದ ವಿಶೇಷ ಕರ್ತವ್ಯಾಧಿಕಾರಿ ಡಾ. ರಾಜೀವ್ ಕುಮಾರ್ ಜೈಸ್ವಾಲ್ ಮಾತನಾಡಿ, ಮುಂಬರುವ ಸಮ್ಮೇಳನವು ವಿಕಸಿತ ಭಾರತ 2047ಕ್ಕೆ ಕಲ್ಪನೆ, ನಾವೀನ್ಯತೆ, ಸ್ಪೂರ್ತಿ ಎಂಬ ಘೋಷಣೆಯನ್ನು ಹೊಂದಿದೆ. ಸಮ್ಮೇಳನದಲ್ಲಿ ಕೃತಕ ಬುದ್ಧಿಮತ್ತೆ, ನಾವೀನ್ಯತೆ ಸೇರಿದಂತೆ ನವಭಾರತ ನಿರ್ಮಾಣದ ಕುರಿತ ಹಲವು ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದರು.


Share It

You cannot copy content of this page