Law

ಪೊಲೀಸ್ ತನಿಖಾ ವರದಿಯನ್ನು ಆರ್‌ಟಿಐ ಅಡಿ ಪಡೆಯಬಹುದು: ಹೈಕೋರ್ಟ್

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪೊಲೀಸರ ತನಿಖಾ ವರದಿ ಪಡೆಯಲು ಅವಕಾಶವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದ ತನಿಖಾ ವರದಿಯ ಪ್ರತಿಯನ್ನು ಆರ್‌ಟಿಐ ಅಡಿ ನೀಡುವಂತೆ ರಾಜ್ಯ ಮಾಹಿತಿ ಹಕ್ಕು ಆಯೋಗ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಿಐಡಿಯ ಮಾಹಿತಿ ಹಕ್ಕು ಅಧಿಕಾರಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎನ್.ಎಸ್ ಸಂಜಯ್ ಗೌಡ ಅವರಿದ್ದ ಪೀಠ ಮೇಲಿನಂತೆ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಯಾವುದೇ ಪ್ರಕರಣದ ತನಿಖೆಯ ಮಾಹಿತಿಯನ್ನು ತನಿಖಾ ಸಂದರ್ಭದಲ್ಲಿ ನೀಡಲು ನಿರ್ಬಂಧವಿದೆ. ಆದರೆ, ತನಿಖೆ ಪೂರ್ಣಗೊಂಡ ನಂತರ ಪೊಲೀಸರ ತನಿಖಾ ವರದಿಯ ಪ್ರತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಬಹುದಾಗಿದೆ. ಈ ಕುರಿತು ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರು ನೀಡಿರುವ ಆದೇಶ ನ್ಯಾಯಸಮ್ಮತವಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಸಿಐಡಿ ಪೊಲೀಸರು ಪ್ರಕರಣವೊಂದರ ಸಂಬಂಧ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಆ ‘ಬಿ’ ರಿಪೋರ್ಟ್‌ನ ಪ್ರತಿ ಒದಗಿಸುವಂತೆ ಕೋರಿ ಧಾರವಾಡದ ಮಲ್ಲೇಶಪ್ಪ ಎಂ. ಚಿಕ್ಕೇರಿ ಎಂಬುವರು ಸಿಐಡಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ, ತನಿಖಾ ವರದಿಯನ್ನು ನೀಡಲು ಸಿಐಡಿಯ ಮಾಹಿತಿ ಹಕ್ಕು ಅಧಿಕಾರಿ ನಿರಾಕರಿಸಿದ್ದರು.

ಬಳಿಕ ಮಲ್ಲೇಶಪ್ಪ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ಆಯೋಗದ ಆಯುಕ್ತರು, ಮಲ್ಲೇಶ್ವಪ್ಪ ಅವರ ಕೋರಿಕೆಯಂತೆ ತನಿಖಾ ವರದಿಯ ಪ್ರತಿ ಒದಗಿಸುವಂತೆ ಸಿಐಡಿಗೆ ಸೂಚಿಸಿ ಆದೇಶಿಸಿದ್ದರು.

ಈ ಆದೇಶವನ್ನು ಪ್ರಶ್ನಿಸಿ ಸಿಐಡಿಯ ಮಾಹಿತಿ ಹಕ್ಕು ಅಧಿಕಾರಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಆರ್‌ಟಿಐ ಅಡಿಯಲ್ಲಿ ಪೊಲೀಸರ ತನಿಖಾ ವರದಿಯ ಪ್ರತಿಯನ್ನು ಪಡೆಯುವ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದೆ.

(WP 18599/2021)


Share It

You cannot copy content of this page