ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನಟೆಕೋರು ಗ್ರಾಮದ ಬಳಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಐಷಾರಾಮಿ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿದಂತೆ 20 ಮಂದಿ ಸಜೀವ ದಹನವಾಗಿದ್ದು, ಈ ಪೈಕಿ ಉದ್ಯೋಗವನ್ನು ಅರಸಿ ಬಂದು ನಗರದಲ್ಲಿ ನೆಲೆಸಿದ್ದ ಎಂಟು ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಮೂಲದ ರಮೇಶ್(38) ಅವರ ಕುಟುಂಬವು ನಗರದ ಕಮ್ಮನಹಳ್ಳಿಯಲ್ಲಿ ನೆಲೆಸಿತ್ತು. ಪತ್ನಿ ಅನುಷಾ(35), ಮಕ್ಕಳಾದ ಶಶಾಂಕ್(12) ಹಾಗೂ ಮಾನ್ವಿತಾ(10) ಜತೆಗೆ ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳಿದ್ದರು. ಈ ಕುಟುಂಬವು ದುರಂತಕ್ಕೀಡಾದ ವೇಮುರಿ ಕಾವೇರಿ ಖಾಸಗಿ ಟ್ರಾವೆಲ್ಸ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ದುರಂತ ಸಂಭವಿಸಿದ ವೇಳೆ ಇಬ್ಬರು ಮಕ್ಕಳು ಮತ್ತು ದಂಪತಿ ನಿದ್ದೆಯಲ್ಲಿದ್ದರು. ಬೆಂಕಿ ಹೊತ್ತಿದ ನಂತರ ಹೊರಕ್ಕೆ ಬರಲು ಸಾಧ್ಯವಾಗದೇ ಇಡೀ ಕುಟುಂಬವೇ ಅಗ್ನಿಗೆ ಆಹುತಿಯಾಗಿದೆ.
ನಾಲ್ವರು ಟೆಕ್ಕಿಗಳು ದಹನ: ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಊರುಗಳಿಗೆ ತೆರಳಿದ್ದ ಟೆಕ್ಕಿಗಳು ವಾಪಸ್ಸು ಬರುವ ವೇಳೆ ಸಂಭವಿಸಿದ ದುರಂತದಲ್ಲಿ, ಟೆಕ್ಕಿಗಳಾದ ಯದಾದ್ರಿ ಭುವನಗಿರಿ ಜಿಲ್ಲೆಯ ವಸ್ತಕೊಂಡೂರು ಗ್ರಾಮದ ಅನುಷಾ ರೆಡ್ಡಿ (22), ಬಾಪಟ್ಲ ಜಿಲ್ಲೆಯ ಗನ್ನಮನೇನಿ (27), ಮೆದಕ್ ಜಿಲ್ಲೆಯ ಚಂದನಾ (23) ಮತ್ತು ಮೇಘನಾಥ್ (24) ಅವರು ದುರಂತ ಅಂತ್ಯಕಂಡಿದ್ದಾರೆ.
ಬೆಂಗಳೂರಿನಲ್ಲಿ ನೆಲಸಿದ್ದ ಎಂಟು ಮಂದಿ ಮೃತಪಟ್ಟಿರುವ ಮಾಹಿತಿ ದೊರತಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳ ತಂಡವು ಕರ್ನೂಲ್‌ಗೆ ತೆರಳಿದೆ. ನಗರದಲ್ಲಿ ನೆಲಸಿದ್ದವರು ಇನ್ನೂ ಯಾರಾದರೂ ತೊಂದರೆಗೆ ಸಿಲುಕಿದ್ಧಾರೆಯೇ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
