ಚೆನ್ನೈ: ದೇವಸ್ಥಾನಗಳ ಅರ್ಚಕರಾಗಿ ಯಾವುದೇ ಜಾತಿ/ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ನೇಮಕ ಮಾಡಬಹುದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅರ್ಚಕರ ನೇಮಕಾತಿಯು ಜಾತ್ಯಾತೀತ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಅರ್ಚಕರ ಹುದ್ದೆಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ವಂಶಪಾರಂಪರ್ಯದ ಹಕ್ಕು ಕೇಳಲಾಗದು ಎಂದು ನ್ಯಾ. ಎನ್. ಆನಂದ್ ವೆಂಕಟೇಶ್ ಅವರಿದ್ದ ಪೀಠ ಹೇಳಿದೆ.
ಅಲ್ಲದೇ, ದೇವಸ್ಥಾನದ ಅರ್ಚಕರಾಗಿ ನೇಮಕಗೊಳ್ಳುವ ವ್ಯಕ್ತಿಗೆ ಇರಬೇಕಾದ ಅರ್ಹತೆ ಒಂದೇ. ಅದು ದೇವಸ್ಥಾನದ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಸರಿಯಾಗಿ ತಿಳಿದಿರಬೇಕು. ಅಂತಹ ಯಾವುದೇ ವ್ಯಕ್ತಿಯನ್ನು ಜಾತಿ/ಪಂಗಡ ಪರಿಗಣಿಸದೇ ಅರ್ಚಕರಾಗಿ ನೇಮಕ ಮಾಡಬಹುದು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. (any person belonging to any caste or creed can be appointed as an Archaka provided he is a well-versed and an accomplished person in the Agamas and rituals necessary to be performed in a temple.)
ಅಲ್ಲದೇ, ದೇವಸ್ಥಾನಗಳಿಗೆ ವಂಶಪಾರ್ಯಂಪರ್ಯವಾಗಿ ಬಂದವರನ್ನೇ ಅರ್ಚಕರಾಗಿ ನೇಮಕ ಮಾಡಬೇಕು, ಇತರೆ ಜಾತಿಯಯವರನ್ನು ನೇಮಕ ಮಾಡಬಾರದು ಎಂದು ಒತ್ತಾಯಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಹೈಕೋರ್ಟ್ ತನ್ನ ತೀರ್ಪುಗೆ ಪೂರಕವಾಗಿ ಸುಪ್ರೀಂಕೋರ್ಟ್ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದೆ. (The Apex Court once again held that there is no justification to insist that only a brahmin (in this case, a Malayala brahmin) alone can perform the rites and rituals and that it can be performed by anyone who is well-versed, properly trained and qualified to perform the pooja in a manner conducive and appropriate to the worship of the particular deity. Hence, the Apex Court frowned on insisting for a pedigree based on caste to perform the rites and rituals in a temple. This is a further reiteration of the principle that the Archaka performing service in the temple falls under the secular part.)
ಪ್ರಕರಣದ ಹಿನ್ನೆಲೆ: ತಮಿಳುನಾಡಿನ ಸೇಲಂ ಜಿಲ್ಲೆಯ ಶ್ರೀಸುಗುವಣೇಶ್ವರ ದೇವಸ್ಥಾನಕ್ಕೆ ಅರ್ಚಕರು/ಸ್ಥಾನಿಕರ ಹುದ್ದೆಗೆ ನೇಮಕಾತಿ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆ ಪ್ರಶ್ನಿಸಿ ಮುತ್ತು ಸುಬ್ರಹ್ಮಣ್ಯ ಗುರುಕ್ಕಲ್ ಎಂಬುವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ನಿಯಮಬಾಹಿರವಾಗಿ ಅರ್ಚಕರ ನೇಮಕಾತಿಗೆ ಮುಂದಾಗಿದ್ದಾರೆ. ವಂಶಪಾರ್ಯಂಪರ್ಯವಾಗಿ ತಾವು ದೇವಸ್ಥಾನದ ಅರ್ಚಕರಾಗಿದ್ದು, ತಮ್ಮನ್ನು ಅರ್ಚಕ ಹುದ್ದೆಗೆ ಪರಿಗಣಿಸದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು.
(Writ Petition No.3997 of 2018)

