ಬೆಂಗಳೂರು: ವಕೀಲ ವೃತ್ತಿ ಆರಂಭಿಸುವ ಯುವ ವಕೀಲರು ಟ್ರಯಲ್ ಕೋರ್ಟ್‌ನಲ್ಲಿ ವೃತ್ತಿ ಜೀವನ ಆರಂಭಿಸುವುದು ಉತ್ತಮ, ಏಕೆಂದರೆ ಅಲ್ಲಿ ಸಿಗುವ ಉತ್ತಮವಾದ ವೃತ್ತಿ ಅನುಭವ ಎಲ್ಲಿಯೂ ಸಿಗಲಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಸಲಹೆ ನೀಡಿದರು.
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಶನಿವಾರ ನ್ಯಾಯಮಿತ್ರ ಸಹಕಾರಿ ಸಂಘದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ವಕೀಲರು ಸಮಾಜ ಬದಲಾಯಿಸುವ ವೈದ್ಯರಿದ್ದಂತೆ. ಸಮಾಜ ಮತ್ತು ದೇಶವನ್ನೇ ಬದಲಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ವಕೀಲರಿಗೆ ಇದೆ. ಆದ್ದರಿಂದ ವಕೀಲರಿಗಾಗಿ ವಸತಿ ನಿವೇಶನಗಳನ್ನು ದೊಡ್ಡ ಪ್ರಮಾಣದಲ್ಲಿ ಮಂಜೂರು ಮಾಡಬೇಕು. ವಕೀಲರ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಇರುವ ಭೂಮಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಇಂದು ನಡೆಯುತ್ತಿರುವ ಬೆಳ್ಳಿ ಮಹೋತ್ಸವವು ಸ್ಥಿರತೆ, ಬಾಂಧವ್ಯ, ಬದ್ಧತೆ ಮತ್ತು ಸಾಧನೆಯ ಪ್ರತೀಕವಾಗಿದೆ. ನನ್ನ ವೃತ್ತಿ ಜೀವನ ಆರಂಭ ಆಗಿದ್ದು ವಕೀಲರ ಸಹಕಾರಿ ಸಂಘದಲ್ಲಿ. ನನ್ನ ಎಲ್ಲಾ ಸಾಧನೆಯೂ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ಸಹಕಾರಿ ಬ್ಯಾಂಕ್‌ಗೆ ಸಲ್ಲುತ್ತದೆ ಎಂದು ನೆನೆದರು.
ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಡಿಸಿಎಂ ಡಿ.ಕೆ ಶಿವಕುಮಾರ್, ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಅಧ್ಯಕ್ಷ ಎಂ.ಎಸ್. ಶೇಖರಪ್ಪ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಕಾರ್ಯದರ್ಶಿ ಪ್ರವೀಣ್ ಗೌಡ, ಬೆಂಗಳೂರು ವಕೀಲರ ಸಹಕಾರಿ ಸಂಘದ ಅಧ್ಯಕ್ಷ ನಂಜಪ್ಪ ಕಲ್ಲೇಗೌಡ, ವಕೀಲರ ಸಂಘದ ಸಾಹಿತ್ಯ ಒಕ್ಕೂಟದ ಅಧ್ಯಕ್ಷ ಮಂಜುನಾಥ ಬಿ. ಗೌಡ ಉಪಸ್ಥಿತರಿದ್ದರು. ನ್ಯಾಯಮಿತ್ರ ಸಹಕಾರಿ ಸಂಘದ ಅಧ್ಯಕ್ಷ ಎಸ್. ಯತಿರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

