ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹಂಚಿಕೆಯಲ್ಲಿ ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಅ.31ರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.
ಬುಧವಾರ ಒಳ ಮೀಸಲಾತಿ ಜಾರಿ ಮಾಡಲು ಇರುವ ಸವಾಲುಗಳ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಕರೆದಿದ್ದ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ, ಅಲೆಮಾರಿ ಸಮುದಾಯದ ಪ್ರತಿನಿಧಿಗಳನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ಅ.31ರಂದು ನಡೆಯುವ ಸಭೆಯಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಒಳ ಮೀಸಲಾತಿ ಹೋರಾಟಗಾರರು ದಿಲ್ಲಿಗೆ ಹೋಗಿದ್ದಾಗ ಸಂಧಾನ ನಡೆಸಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಂಗಳವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ. ಬುಧವಾರ ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್ ನೇತೃತ್ವದಲ್ಲಿ ಅಲೆಮಾರಿ ಮುಖಂಡರ ತಂಡ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ರನ್ನು ಕಂಡು ಸಮಸ್ಯೆಯ ಪರಿಹಾರಕ್ಕೆ ಇರುವ ಮಾರ್ಗೋಪಾಯಗಳ ಕುರಿತು ಕೂಲಂಕುಷವಾಗಿ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿರುವ 5.22 ಲಕ್ಷ ಅಲೆಮಾರಿ ಕುಟುಂಬಗಳ ಭವಿಷ್ಯ ಶುಕ್ರವಾರ (ಅ.31) ರಂದು ತೀರ್ಮಾನವಾಗುವ ಸಾಧ್ಯತೆಯಿದೆ.
