News

ಮಹಿಳಾ ಆಯೋಗದಂತೆಯೇ ಪುರುಷ ಆಯೋಗ ರಚನೆ ಕೋರಿದ್ದ ಪಿಐಎಲ್ ವಜಾ

Share It

ನವದೆಹಲಿ: ಮಹಿಳೆಯರ ಹಿತರಕ್ಷಣೆಗೆ ರೂಪಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದಂತೆಯೇ ರಾಷ್ಟ್ರೀಯ ಪುರುಷ ಆಯೋಗ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಕೌಟುಂಬಿಕ ಕಲಹ ಮತ್ತಿತರೆ ಕಾರಣಗಳಿಗೆ ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಅರ್ಜಿದಾರರ ಕೋರಿಕೆ: 2021 ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 1,64,033 ಜನರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇವರಲ್ಲಿ ವಿವಾಹಿತ ಮಹಿಳೆಯ ಸಂಖ್ಯೆ 28,680 ಇದ್ದರೆ, ಪುರುಷರ ಸಂಖ್ಯೆ 81,063 ಇದೆ. ಕೌಟುಂಬಿಕ ಹಿಂಸೆಯ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿರುವ ವಿವಾಹಿತ ಪುರುಷರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ವಿವಾಹಿತ ಪುರುಷರ ಆತ್ಮಹತ್ಯೆ ಪ್ರಕರಣಗಳನ್ನು ಪರಿಶೀಲಿಸುವ ಅಗತ್ಯವಿದೆ.

ಕೌಟುಂಬಿಕ ಕಿರುಕುಳಕ್ಕೆ ಸಿಲುಕಿರುವ ಪುರುಷರ ದೂರುಗಳನ್ನು ಆಲಿಸಲು ಹಾಗೂ ಪುರುಷರ ಹಿತರಕ್ಷಣೆ ನಿಟ್ಟಿನಲ್ಲಿ ರಾಷ್ಟ್ರೀಯ ಪುರುಷ ಆಯೋಗ ರಚಿಸಲು ಆದೇಶಿಸಿಬೇಕು. ಅಲ್ಲಿಯವರೆಗೂ ಇಂತಹ ಪ್ರಕರಣಗಳನ್ನು ಆಲಿಸಲು ಮಾನವ ಹಕ್ಕುಗಳ ಆಯೋಗಕ್ಕೆ ಸೂಚಿಸಬೇಕು. ಕೌಟುಂಬಿಕ ಕಿರುಕುಳದಿಂದ ವಿವಾಹಿತ ಪುರುಷರು ಆತ್ಮಹತ್ಯೆಗೆ ಶರಣಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಲು ಕಾನೂನು ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಈಗಿರುವ ಕಾನೂನು ಸಾಕು: ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ನೀವು ಕೇವಲ ಒಂದು ಕಡೆಯ ಕಥೆಯನ್ನಷ್ಟೇ ಹೇಳಿದ್ದೀರಿ. ಮದುವೆಯಾದ ಬೆನ್ನಲ್ಲೇ ಸಾವನ್ನಪ್ಪುತ್ತಿರುವ ಯುವತಿಯರ ಅಂಕಿ ಸಂಖ್ಯೆ ನೀಡಬಲ್ಲಿರೇ ಎಂದು ಪ್ರಶ್ನಿಸಿದೆ. ಅಲ್ಲದೇ ಅರ್ಜಿದಾರರು ಎತ್ತಿರುವ ಸಮಸ್ಯೆಗಳನ್ನು ಅದನ್ನು ಈಗಿರುವ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿಯೇ ನಿಭಾಯಿಸಬಹುದಾಗಿದೆ. ಪರಿಹಾರ ರಹಿತವಾಗಿ ಯಾರೂ ಉಳಿದಿಲ್ಲ ಎಂದು ತಿಳಿಸಿ ಅರ್ಜಿ ವಜಾ ಮಾಡಿದೆ.


Share It

You cannot copy content of this page