ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು
ಪೊಲೀಸ್ ಠಾಣೆಗೆ ಹಲವು ಬಾರಿ ಅಲೆದಾಡಿದರೂ ದೂರು ದಾಖಲಿಸದ ಮುಂಬೈ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ದೂರುದಾರರಿಗೆ 20 ಸಾವಿರ ಪರಿಹಾರ ನೀಡುವಂತೆ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಬೆಂಗಳೂರು ಮೂಲದ ದೂರುದಾರರಾದ ಅನಿಲ್ ಕುಮಾರ್ ಅವರಿಗೆ ಪರಿಹಾರ ನೀಡುವಂತೆ ನ್ಯಾ. ರೇವತಿ ಮೋಹಿತ್ ದೇರೆ ಹಾಗೂ ನ್ಯಾ.ಪೃಥ್ವಿರಾಜ್ ಅವರಿದ್ದ ಪೀಠ ನವೆಂಬರ್ 19 ರಂದು ಈ ತೀರ್ಪು ನೀಡಿದೆ.
ಬೆಂಗಳೂರು ಮೂಲದ ಅಭಿನವ್ ಮುಂಬೈನಲ್ಲಿ ಉದ್ಯೋಗದಲ್ಲಿದ್ದರು. ಈ ವೇಳೆ ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು ಜನವರಿ 6ರಂದು ಆತ್ಯಹತ್ಯೆಗೆ ಶರಣಾಗಿದ್ದರು. ಈ ವಿಚಾರವಾಗಿ ಅವರ ತಂದೆ ಅನಿಲ್ ಕುಮಾರ್ ಮುಂಬೈ ನ ರಾಕ್ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದರು. ನಂತರ ದೂರುದಾರರು ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿ ಅಲ್ಲಿಂದ ಪೊಲೀಸರಿಗೆ ದೂರು ದಾಖಲಿಸುವಂತೆ ಜೂನ್ ತಿಂಗಳಲ್ಲಿ ಆದೇಶ ತಂದಿದ್ದರು. ಹಾಗಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸದಿದ್ದಾಗ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮನವಿಯಲ್ಲಿ ಮ್ಯಾಜಿಸ್ಟ್ರೇಟ್ ಆದೇಶದಂತೆ ಎಫ್ಐಆರ್ ದಾಖಲಿಸಲು ನಿರ್ದೇಶುವಂತೆ ಕೋರಿದ್ದರು.
ಮನವಿ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಜೂನ್ ತಿಂಗಳಲ್ಲಿ ಮ್ಯಾಜಿಸ್ಟ್ರೇಟ್ ಆದೇಶ ನೀಡಿದ ನಂತರವೂ ಪೊಲೀಸರು ಎಫ್ಐಆರ್ ದಾಖಲಿಸದಿರುವುದು ಮತ್ತು ಅರ್ಜಿದಾರರನ್ನು ದೂರು ದಾಖಲಿಸುವ ವಿಚಾರವಾಗಿ ಈ ಪರಿ ಅಲೆದಾಡುವಂತೆ ಮಾಡಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೇ, ಅರ್ಜಿದಾರರನ್ನು ಅಲೆದಾಡಿಸಿರುವುದಕ್ಕೆ 20 ಸಾವಿರ ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಿದೆ.
2024ರ ಜನವರಿ 6ರಂದು ಅಭಿನವ್ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಯಹತ್ಯೆಗೆ ಪ್ರೇರೇಪಿಸಿದ ಮತ್ತು ಕಿರುಕುಳ ನೀಡಿದ್ದ ನಾಲ್ವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಅಭಿನವ್ ತಂದೆ ಅನಿಲ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಮಗನಿಗೆ ಕಿರುಕುಳ ನೀಡಿದ್ದು, ಈ ಸಂಬಂಧ 2023ರ ಡಿಸೆಂಬರ್ 27 ರಿಂದ ಜನವರಿ 5ರವರೆಗೆ ಮಗ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿನ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸುವಂತೆ ಹಾಗೂ ಆರೋಪಿತರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದರು.
ಆದರೆ ಪೊಲೀಸರು ಎಫ್ಐಆರ್ ದಾಖಲಿಸುವುದಕ್ಕೂ ಮುಂದಾಗಿದ್ದಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿದ್ದರು. ಮ್ಯಾಜಿಸ್ಟ್ರೇಟ್ ಆದೇಶದ ನಂತರವೂ ಎಫ್ಆಆರ್ ದಾಖಲಿಸದೇ ಇದ್ದಾಗ ಹಿರಿಯ ಪೊಲೀಸ್ ಇನ್ಸಪೆಕ್ಟರ್ ಗೆ ಮ್ಯಾಜಿಸ್ಟ್ರೇಟ್ ಆದೇಶ ಪಾಲಿಸಲು ನಿರ್ದೇಶಿಸಿಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

