News

ನಿಯಮ ಉಲ್ಲಂಘನೆ; ಆರ್.ಟಿ.ಒ ಅಧಿಕಾರಿಗಳಿಂದ 63 ವಾಹನಗಳು ಜಪ್ತಿ

Share It

ಬೆಂಗಳೂರು: ಸಿಲಿಕಾನ್ ಸಿಟಿ ಮತ್ತು ಹೊರ ವಲಯಗಳಲ್ಲಿ ಆರ್.ಟಿ.ಒ ಅಧಿಕಾರಿಗಳು ಒಟ್ಟು 12 ತಂಡಗಳನ್ನು ರಚಿಸಿಕೊಂಡು ವಿಶೇಷ ತಪಾಸಣೆಯನ್ನು ನಡೆಸಿ 63 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ಟೋಬರ್ 24 ರಿಂದ ಅಕ್ಟೋಬರ್ 30 ರವರೆಗೆ ಅತ್ತಿಬೆಲೆ ಹಾಗೂ ದೇವನಹಳ್ಳಿ ಸಮೀಪದಲ್ಲಿ ಕಾರ್ಯಚರಣೆ ಕೈಗೊಂಡು ಪ್ರಯಾಣಿಕರ ಸುರಕ್ಷತಾ ಅಂಶಗಳಾದ ತುರ್ತು ನಿರ್ಗಮನ ವ್ಯವಸ್ಥೆ, ಬೆಂಕಿ ನಂದಿಸುವ ಸಾಧನ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಪ್ರಯಾಣಿಕರ ವಾಹನಗಳಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಸರಕುಗಳ ವಿರುದ್ಧ ವಿಶೇಷ ಕಾರ್ಯಚರಣೆ ನೆಡೆಸಿದ್ದಾರೆ. ತೆರಿಗೆ ಪಾವತಿಸದೇ ಮತ್ತು ರಹದಾರಿ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು ಸುಮಾರು 380ಕ್ಕೂ ಹೆಚ್ಚು ಖಾಸಗಿ ಬಸ್ಸುಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು, ಸುಮಾರು 63 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಈ ವಿಶೇಷ ಕಾರ್ಯಚರಣೆಯ ಸಂದರ್ಭದಲ್ಲಿ ವಾಹನಗಳನ್ನು ಜಪ್ತಿಗೊಳಿಸುವಾಗ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ಸುಗಳನ್ನು ವ್ಯವಸ್ಥೆಗೊಳಿಸಿ, ಪ್ರಯಾಣಿಕರಿಗೆ ಅನುಕೂಲವನ್ನು ಕಲ್ಪಿಸಲಾಯಿತು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರ ವಾಹನಗಳಲ್ಲಿ ಸರಕು ಸಾಗಿಸುತ್ತಿರುವ ಬಗ್ಗೆ ವಾಹನದ ಮಾಲೀಕರಿಗೆ ಹಾಗೂ ಸಿಬ್ಬಂದಿಯವರಿಗೆ ಅನಧಿಕೃತ ಸರಕು ಸಾಗಿಸದಂತೆ ಜಾಗೃತಿಯನ್ನೂ ಸಹ ಮೂಡಿಸಲಾಯಿತು. ಕಾರ್ಯಚರಣೆ ಸಂದರ್ಭದಲ್ಲಿ ಸರಕುಸಾಗಣಿಕೆ ಹಾಗೂ ರಹದಾರಿ ಉಲ್ಲಂಘನೆ ಪ್ರಕರಣ ದಾಖಲಿಸಿ, ಅರ್ಹತಾ ಪತ್ರ, ನೋಂದಣಿ ಪತ್ರದ ಅಮಾನತ್ತಿನ ಕುರಿತು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.


Share It

You cannot copy content of this page