News

ಸೇವಾಶ್ರಮ ಹೆಣ್ಣುಮಕ್ಕಳಿಗೆ ಆಸರೆಯಾಗಿದೆ: ಕೇಂದ್ರ ಸಚಿವ ವಿ. ಸೋಮಣ್ಣ

Share It

ಬೆಂಗಳೂರು: ಸೇವಾ ವಿಚಾರದಲ್ಲಿ ಸುಮಂಗಲಿ ಸೇವಾಶ್ರಮವು ಯಾವುದೇ ಜಾತಿ, ಮತ, ಪಂಥವಿಲ್ಲದೆ ಹೆಣ್ಣುಮಕ್ಕಳಿಗೆ ಆಸರೆಯಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಸುಮಂಗಲಿ ಸೇವಾಶ್ರಮದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸುಮಂಗಲಿ ಸೇವಾಶ್ರಮದ ಸುಶೀಲಮ್ಮ ಮತ್ತು ಕಾಂತಮ್ಮ ಅವರ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಅಲ್ಲದೇ ಎಚ್‌ಐವಿ ಪೀಡಿತ ಮಕ್ಕಳಿಗಾಗಿಯೇ ದೂರದೃಷ್ಟಿ ಯೋಜನೆಯನ್ನು ಸೇವಾಶ್ರಮದವರು ರೂಪಿಸಿದ್ದಾರೆ. ಕೇಂದ್ರ ಸರ್ಕಾರ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡುತ್ತಿದೆ. ಇಂತಹ ಅತ್ಯುನ್ನತ ಪ್ರಶಸ್ತಿಗಳಿಗೆ ಸುಮಂಗಲಿ ಸೇವಾಶ್ರಮ ಅರ್ಹವಾಗಿದೆ ಎಂದರು.

ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮೈಕೋ ಸಂಸ್ಥೆಯ ಉದ್ಯೋಗ ತೊರೆದು, ಅನಾಥ ಮಕ್ಕಳ ಸೇವೆಗೆ ಸುಶೀಲಮ್ಮ ತೊಡಗಿಸಿಕೊಂಡರು. ಈಗಾಗಲೇ ಅವರ ಆಸರೆಯಲ್ಲಿ ಬೆಳೆದ ಮಕ್ಕಳು ವೈದ್ಯರು ಸೇರಿದಂತೆ ವಿವಿಧ ವೃತ್ತಿ ಮಾಡುತ್ತಾ, ವಿದೇಶಗಳಲ್ಲಿ ಕೂಡ ನೆಲಸಿದ್ದಾರೆ ಎಂದು ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಅಬಲೆಯರು, ನಿರಾಶ್ರಿತರು ಹಾಗೂ ಮಹಿಳೆಯರಿಗೆ ಆಶ್ರಯ ಒದಗಿಸಿ, ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಬದುಕು ರೂಪಿಸುವ ಕೆಲಸವನ್ನು ಸೇವಾಶ್ರಮ ಮಾಡುತ್ತಿದೆ ಎಂದು ಹೇಳಿದರು.

ಇದೇ ವೇಳೆ ರಾಜ್ಯಸಭಾ ಸದಸ್ಯ ಕೆ.ನಾರಾಯಣ ಅವರು ಯೋಗ ಪುಸ್ತಕ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಬೀದರ್ ಬಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಸೇರಿದಂತೆ ಮುಂತಾದವರಿದ್ದರು.


Share It

You cannot copy content of this page