ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕೈಗೆತ್ತಿಕೊಂಡಿರುವ 28 ರಸ್ತೆಗಳಲ್ಲಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಹಾಗೂ ಓಎಫ್‌ಸಿ ಕೇಬಲ್ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗಳಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ವೈಟ್ ಟಾಪಿಂಗ್ ಪ್ರಗತಿಯಲ್ಲಿರುವ ರಸ್ತೆಗಳಲ್ಲಿ ಜಲಮಂಡಳಿಯಿಂದ ರಸ್ತೆ ಪುನರ್ ಸ್ಥಾಪನೆ ಕಾರ್ಯ, ಒಳಚರಂಡಿ ಸೋರುವಿಕೆ, ಒಳಚರಂಡಿ ಚೇಂಬರ್‌ಗಳನ್ನು ಎತ್ತರಿಸುವುದು, ಒಳಚರಂಡಿಯಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುವುದು, ಕತ್ತರಿಸಿರುವ ಭಾಗಗಳನ್ನು ದುರಸ್ತಿಪಡಿಸುವುದು, ಸಂಚಾರಿ ಪೊಲೀಸ್ ವಿಭಾಗದಿಂದ ಅನುಮತಿ ಪಡೆಯುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು.
ಬೆಸ್ಕಾಂ ವಿಭಾಗವು ಕೆಲವೆಡೆ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಸ್ಥಳಾಂತರದ ಕೆಲಸವನ್ನು ಶೀಘ್ರ ಪೂರ್ಣಗೊಳಿಸಬೇಕು. ಸಂಚಾರಿ ಪೊಲೀಸ್ ವಿಭಾಗದಿಂದ ಅನುಮತಿ ಸಿಗದಿರುವ ಕಡೆಗಳಲ್ಲಿ ಕೂಡಲೇ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಬೇಕು ಎಂದು ಹೇಳಿದರು.
ವೈಟ್ ಟಾಪಿಂಗ್ ಕೈಗೆತ್ತಿಕೊಂಡಿರುವ ರಸ್ತೆಗಳಲ್ಲಿ ಹಾಗೂ ಹೈ-ಡೆನ್ಸಿಟಿ ಕಾರಿಡಾರ್ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಇರದಂತೆ ನೋಡಿಕೊಳ್ಳಬೇಕು. ಜಲಮಂಡಳಿಯಿಂದ ಕೆಲಸ ಪೂರ್ಣಗೊಂಡಿರುವ ಸ್ಥಳಗಳಲ್ಲಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಇಂದಿನ ಸಭೆಯಲ್ಲಿ ವೈಟ್ ಟಾಪಿಂಗ್ ವಿಚಾರವಾಗಿ ಚರ್ಚೆಯಾದ ವಿಷಯಗಳಿಗೆ ಸಂಬಂಧಿಸಿದಂತೆ, ಆಯಾ ಇಲಾಖೆಗಳ ಸಮಸ್ಯೆಗಳನ್ನು ಯಾವ ದಿನಾಂಕದೊಳಗಾಗಿ ಪೂರ್ಣಗೊಳಿಸಲಾಗುವುದು ಎನ್ನುವ ಪಟ್ಟಿಯನ್ನು ಕೂಡಲೆ ನೀಡಬೇಕು. ಜೊತೆಗೆ ಆ ಸಮಯದೊಳಗಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿದರು.
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪಾಲಿಕೆಯ ರಾಜಕಾಲುವೆ ಕಾಮಗಾರಿಗಳು, ಜಲಮಂಡಳಿಯ ಒಳಚರಂಡಿ ಲೈನ್ ಹಾಗೂ ಮೆಟ್ರೋದಿಂದ ವಿದ್ಯುತ್ ತಂತಿ ಅಳವಡಿಕೆ ನಡೆಯಬೇಕಿದ್ದು, ಈ ಮೂರೂ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಜಂಕ್ಷನ್‌ನಲ್ಲಿ ಜಲಾವೃತ ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕು. ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಓಎಫ್‌ಸಿ ಸೇವಾ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ನಗರದಲ್ಲಿ ಪಾದಚಾರಿ ಮಾರ್ಗಗಳು ಹಾಗೂ ವಿದ್ಯುತ್ ಕಂಬಗಳ ಮೇಲೆ ಅನಧಿಕೃತವಾಗಿ ನೇತಾಡುತ್ತಿರುವ ಓಎಫ್‌ಸಿ ಕೇಬಲ್‌ಗಳು ನಗರದ ಸೌಂದರ್ಯಕ್ಕೆ ಧಕ್ಕೆಯನ್ನುಂಟುಮಾಡುತ್ತಿವೆ. ಆದ್ದರಿಂದ ಇತರೆ ನಗರಗಳಲ್ಲಿ ಯಾವ ರೀತಿಯಲ್ಲಿ ಓಎಫ್‌ಸಿ ಕೇಬಲ್‌ಗಳನ್ನು ಅಳವಡಿಸಲಾಗಿದೆ ಎಂಬುದನ್ನು ಪರಿಶೀಲಿಸಿ, ಆ ಮಾದರಿಯನ್ನು ಬೆಂಗಳೂರಿನಲ್ಲಿ ಅನುಸರಿಸಬಹುದೇ ಎಂಬುದರ ಕುರಿತು ವರದಿ ನೀಡುಬೇಕು ಎಂದು ಸೂಚಿಸಿದರು. ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್, ರವಿ, ರಂಗನಾಥ್, ಇಸ್ಮಾಯಿಲ್ ಹಾಗೂ ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಸಂಚಾರಿ ಪೊಲೀಸ್ ವಿಭಾಗದ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

