News

ನವೆಂಬರ್ 2 ರಂದು ನಡೆಯಲಿದೆ ಕೆ-ಸೆಟ್ ಪರೀಕ್ಷೆ

Share It

ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ (ನ.2) ನಡೆಸಲಿದ್ದು, ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಂಡಿದೆ.

ಈ ಬಾರಿಯೂ ಮುಖಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುತ್ತದೆ. ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 33 ವಿಷಯಗಳಿಗೆ ನಡೆಯುವ ಕೆ-ಸೆಟ್ ಪರೀಕ್ಷೆಯನ್ನು 1.36 ಲಕ್ಷ ಮಂದಿ ತೆಗೆದುಕೊಂಡಿದ್ದಾರೆ. 11 ಜಿಲ್ಲೆಗಳ (ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ) 316 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಬೆಂಗಳೂರಿನಲ್ಲಿ ಎಲ್ಲ 33 ವಿಷಯಗಳ ಪರೀಕ್ಷೆ ನಡೆದರೆ, ಉಳಿದ ಜಿಲ್ಲೆಗಳಲ್ಲಿ 11 ವಿಷಯಗಳ ಪರೀಕ್ಷೆ ಗಳು ಮಾತ್ರ ನಡೆಯಲಿವೆ. ಈ ಪರೀಕ್ಷೆಗಳಿಗೆ ನೆಗೆಟಿವ್ ಮೌಲ್ಯಮಾಪನ ಇರುವುದಿಲ್ಲ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಪರೀಕ್ಷೆಗಳು ನಡೆಯಲಿದ್ದು, ಒಮ್ಮೆಗೇ ಎರಡೂ ಪತ್ರಿಕೆಗಳ (ಪತ್ರಿಕೆ 1 ಮತ್ತು 2) ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಮೂರು ಗಂಟೆ ಅವಧಿಯಲ್ಲಿ 100 ಅಂಕಗಳ ಸಾಮಾನ್ಯ ಜ್ಞಾನ ಮತ್ತು 200 ಅಂಕಗಳ ವಿಷಯವಾರು ಪತ್ರಿಕೆಗಳಿಗೆ ಉತ್ತರಿಸಬೇಕಾಗುತ್ತದೆ. ಎರಡೂ ಪತ್ರಿಕೆಗಳಿಗೆ ಪ್ರತ್ಯೇಕ ಓಎಂಆರ್‌ ನೀಡುತ್ತಿದ್ದು, ಆಯಾಯ ಓಎಂಆರ್‌ ನಲ್ಲೇ ಅದರ ಉತ್ತರಗಳನ್ನು ಎಚ್ಚರಿಕೆಯಿಂದ ದಾಖಲಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.

ಈ ಹಿಂದಿನ ಎಲ್ಲ ಪರೀಕ್ಷೆಗಳ ಹಾಗೆಯೇ ಈ ಪರೀಕ್ಷೆಗೂ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳನ್ನು ಮುಖ ಚಹರೆ ಪತ್ತೆ ಮೂಲಕ ತೀವ್ರ ಶೋಧ ನಡೆಸಿಯೇ ಒಳ ಬಿಡಲಾಗುತ್ತದೆ. ಇದಕ್ಕೆ ಅಗತ್ಯ ಪೊಲೀಸ್‌ ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.


Share It

You cannot copy content of this page