ಬೆಂಗಳೂರು: ಬೆಂಗಳೂರು ನಾಗರಿಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ 5 ನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಶನಿವಾರ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆವರಣದಲ್ಲಿ ಧ್ವಜಾರೋಹಣ ಮಾಡಿ, ನಾಡದೇವಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆಯ ನಂತರ ಅವರು ಮಾತನಾಡಿದರು. ಜಿಬಿಎ ಆದ ನಂತರ ಮೊದಲ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಹಬ್ಬದಂತೆ ಆಚರಣೆ ಮಾಡಬೇಕು ಎಂದರು.
ಜಿಬಿಎ 5 ನಗರ ಪಾಲಿಕೆಗಳ ಜೊತೆ ಸಮನ್ವಯ ಮಾಡಿಕೊಂಡು ಜನಗರಿಗೆ ಉತ್ತಮ ಆಡಳಿತ ನೀಡಲಾಗುವುದು. ಅಧಿಕಾರಿ/ಸಿಬ್ಬಂದಿಗಳು ಚುರುಕಾಗಿ ಕೆಲಸ ಮಾಡಿ ಒಳ್ಳೆ ಸೇವೆ ನೀಡಬೇಕು. ಮುಂಬರುವ ವರ್ಷದಲ್ಲಿ ಕನ್ನಡ ರಾಜ್ಯೋತ್ಸವವನ್ನು ಹಬ್ಬದ ವಾತಾವರಣ ಇರುವ ಹಾಗೆ ವಿಜೃಂಭಣೆಯಿಂದ ಆಚರಿಸಬೇಕು. ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಕುಟುಂಬಸಮೇತರಾಗಿ ಬಂದು ಆಚರಣೆ ಮಾಡಬೇಕು ಎಂದು ಹೇಳಿದರು.
ಈ ವೇಳೆ ಮಾಜಿ ಮಹಾಪೌರ ಹುಚ್ಚಪ್ಪ, ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಉಪ ಆಯುಕ್ತ ರವೀಂದ್ರ, ಶರಣಪ್ಪ, ಜಂಟಿ ಆಯುಕ್ತ ಹೇಮಂತ್, ರಂಗನಾಥ್, ಲಕ್ಷ್ಮಿದೇವಿ, ಸಹಾಯಕ ಆಯುಕ್ತ ಗಿರೀಶ್ ನಂದನ್ ಸೇರಿದಂತೆ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

