ಬೆಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ನ. 7ರಂದು ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಆಚಾರ್ಯತ್ರಯರ ಜಯಂತ್ಯುತ್ಸವ ಕಾರ್ಯಕ್ರಮ ಮತ್ತು ಚಾಣಕ್ಯ ಆಡಳಿತ ತರಬೇತಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಅಂದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ ಆಯ್ದ 100 ಜನ ವಿದ್ಯಾರ್ಥಿಗಳಿಗೆ ಮಂಡಳಿಯಿಂದ ಧನ ಸಹಾಯ ಮಾಡಲಾಗುತ್ತಿದೆ. ಅಲ್ಲದೇ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯಲಿದೆ. ವಿಪ್ರ ಸ್ವುದ್ಯಮ ನೇರ ಸಾಲ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಗುತ್ತಿದೆ.
ಕಾರ್ಯಕ್ರಮದ ಕುರಿತು ಬುಧವಾರ ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ಅವರು, ಕಾರ್ಯಕ್ರಮವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಹಿಸಲಿದ್ದಾರೆ. ಚಾಣಕ್ಯ ತರಬೇತಿ ಯೋಜನೆಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ ದೇಶಪಾಂಡೆ ಅವರು ಚಾಣಕ್ಯ ತರಬೇತಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ವಿಶ್ವಾಸ ವೈದ್ಯ, ವಿಧಾನ ಪರಿಷತ್ ಮಾಜಿ ಶಾಸಕ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ನ ಧರ್ಮದರ್ಶಿ ಯು.ಬಿ ವೆಂಕಟೇಶ, ಅಖಿಲ ಕರ್ನಾಟ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ಮಾಜಿ ಅಡ್ವೋಕೇಟ್ ಜನರಲ್, ಲೋಕ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಅಶೋಕ ಹಾರನಹಳ್ಳಿ, ಸರ್ಕಾರದ ಪ್ರದಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉಪಸ್ಥಿತರಿರಲಿದ್ದಾರೆ. ಡಾ. ಬೆಳವಾಡಿ ಮಂಜುನಾಥ್, ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಹಾಗೂ ಡಾ. ವ್ಯಾಸನಕೆರೆ ಪ್ರಭಂಜನಾರ್ಯ ಅವರು ಉಪನ್ಯಾಸ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ, ಪಿ.ಎಂ ಮಾಲತೇಶ್, ಪಿ. ಶ್ರೀನಿವಾಸ್ ಮೂರ್ತಿ ಇದ್ದರು.

