ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ದೂರುದಾರರು ಒಪ್ಪಿಗೆ ಸೂಚಿಸಿದಾಗ ಮಾತ್ರ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ (ಎನ್‌ಐ ಆಕ್ಟ್) ಸೆಕ್ಷನ್ 147 ಅಡಿಯಲ್ಲಿ ಚೆಕ್ ಅಮಾನ್ಯ ಪ್ರಕರಣಗಳನ್ನು ರಾಜಿ ಮಾಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಅಲ್ಲದೇ, ಮೇಲ್ಮನವಿದಾರರು/ದೂರುದಾರರು ಒಪ್ಪಿಗೆ ಸೂಚಿಸದೇ ಇದ್ದಾಗ ಸಿಆರ್ಪಿಸಿ ಸೆಕ್ಷನ್ 482 ಅಡಿ ಅಂತರ್ಗತ ಅಧಿಕಾರ ಅನ್ವಯಿಸುವ ಮೂಲಕ ಚೆಕ್ ಬೌನ್ಸ್ ಪ್ರಕರಣವನ್ನು ಇತ್ಯರ್ಥಪಡಿಸಲಾಗದು ಎಂದು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಆದೇಶಿಸಿದೆ.
ಸಿಆರ್ಪಿಸಿಯ ಸೆಕ್ಷನ್ 482 ಹಾಗೂ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ನ ಸೆಕ್ಷನ್ 147 ವಿಭಿನ್ನ ಮತ್ತು ಪ್ರತ್ಯೇಕವಾಗಿವೆ. ಸಿಆರ್ಪಿಸಿ ಸೆಕ್ಷನ್ 482 ಅನ್ನು ನ್ಯಾಯದ ದುರುಪಯೋಗವನ್ನು ತಡೆಯಲು ಮತ್ತು ನ್ಯಾಯವನ್ನು ದೊರಕಿಸಿಕೊಡಲು ಮಾತ್ರ ಬಳಸಬಹುದಾಗಿದೆ. ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ವಿಶೇಷ ಶಾಸನವಾಗಿದ್ದು, ದೂರುದಾರ ಒಪ್ಪಿಗೆ ನೀಡದರಷ್ಟೇ ಸೆಕ್ಷನ್ 147 ಅಡಿ ಚೆಕ್ ಬೌನ್ಸ್ ಕೇಸುಗಳನ್ನು ರಾಜಿ ಮಾಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಲ್ಲದೇ ಪ್ರಸ್ತುತ ಪ್ರಕರಣದಲ್ಲಿ ಮೇಲ್ಮನವಿದಾರರು/ದೂರುದಾರರು ಖಾತೆಯಲ್ಲಿ ಹಣದ ಕೊರತೆ ಹಿನ್ನೆಲೆಯಲ್ಲಿ ಚೆಕ್ ಅಮಾನ್ಯವಾಗಿದೆ ಎಂದು ಎನ್‌ಐ ಕಾಯ್ದೆಯ ಸೆಕ್ಷನ್ 138 ಅಡಿಯಲ್ಲಿ ದೂರು ಸಲ್ಲಿಸಿದ್ದಾರೆ. ಈ ವೇಳೆ ಪ್ರಕರಣವನ್ನು ರಾಜಿ ಮಾಡಿಕೊಳ್ಳುವುದಾಗಿ ಪ್ರತಿವಾದಿಗಳು ಅರ್ಜಿ ಸಲ್ಲಿಸಿದ್ದಾರೆ. ಮನವಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದ್ದರೂ, ಹೈಕೋರ್ಟ್ ಸಮ್ಮತಿಸಿದೆ. ಹೈಕೋರ್ಟ್ ತನ್ನ ತೀರ್ಪನ್ನು ಸಮರ್ಥಿಸಿಕೊಳ್ಳಲು, ‘ದೂರುದಾರನಿಗೆ ನ್ಯಾಯಯುತ ಪರಿಹಾರ ಪಾವತಿಸಿದಾಗ ರಾಜಿಗೆ ದೂರುದಾರರ ಒಪ್ಪಿಗೆ ಕಡ್ಡಾಯವಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಆದರೆ ಹೈಕೋರ್ಟ್ ನ ತೀರ್ಪು ಸಮರ್ಥನೀಯವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಲ್ಲದೇ, ರಾಜ್ ರೆಡ್ಡಿ ಕಲ್ಲೆಮ್ ವರ್ಸಸ್ ಸ್ಟೇಟ್ ಆಫ್ ಹರಿಯಾಣ ಪ್ರಕರಣದಲ್ಲಿ ರಾಜಿಗೆ ದೂರುದಾರರ ಸಮ್ಮತಿ ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ದೂರುದಾರರಿಗೆ ನ್ಯಾಯಯುತ ಪರಿಹಾರ ಪಾವತಿಸಲಾಗಿದೆ ಎಂಬ ಆಧಾರದ ಮೇಲೆ ಹೈಕೋರ್ಟ್ ನ ತೀರ್ಪನ್ನು ಒಪ್ಪಲಾಗದು. ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ನ ಸೆಕ್ಷನ್ 138 ರ ಅಡಿ ವಿಚಾರಣೆ ಬಾಕಿ ಇರುವಾಗ, ಹೈಕೋರ್ಟ್ ಸಿಆರ್ಪಿಸಿ ಸೆಕ್ಷನ್ 482 ಅಡಿಯಲ್ಲಿ ಪ್ರಕರಣವನ್ನು ರಾಜಿಗೊಳಿಸಿ, ರದ್ದುಪಡಿಸಿರುವ ಕ್ರಮ ಸಿಂಧುವಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
(Criminal Appeal No(s). 3051 – 3052 of 2024)

