ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ರೂ. 8.65 ಕೋಟಿ ಅಂದಾಜು ಮೌಲ್ಯದ ಒಟ್ಟು ಎಕರೆ 2 ಎಕರೆ 18 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
ಶುಕ್ರವಾರ ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಕಾಲುದಾರಿ, ಸ್ಮಶಾನ, ರಾಜಕಾಲುವೆ, ನಕಾಶೆ ದಾರಿ, ಖರಾಬು ಬಂಡೆ ಮತ್ತು ಸರ್ಕಾರಿ ಕೆರೆ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಹೋಬಳಿಯ ಹಳೇಹಳ್ಳಿ ಗ್ರಾಮದ ಸ.ನಂ. 170, 2, 3ರ ಮಧ್ಯದಲ್ಲಿ ಹಾದು ಹೋಗಿರುವ ಕಾಲು ದಾರಿ ತೆರವುಗೊಳಿಸಿರುವ ವಿಸ್ತೀರ್ಣ 0.10 ಗುಂಟೆಗಳಾಗಿದ್ದು, ಅಂದಾಜು ಮೌಲ್ಯದ ರೂ.15 ಲಕ್ಷವಾಗಿದೆ. ಜಿಗಣಿ-2 ಹೋಬಳಿಯ ಹರಪ್ಪನಹಳ್ಳಿ ಗ್ರಾಮದ ಸ.ನಂ.128 ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.08 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ.60 ಲಕ್ಷವಾಗಿದೆ. ಸರ್ಜಾಪುರ-2 ಹೋಬಳಿಯ ನಾರಾಯಣಘಟ್ಟ ಗ್ರಾಮದ ಸ.ನಂ. 144,143,136, 138,135, 134, 145, 68,151 ರ ರಾಜಕಾಲುವೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.20 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 2 ಕೋಟಿಯಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಬೈಚಗುಪ್ಪೆ ಗ್ರಾಮದ ಸ.ನಂ 47/1 & 47/2 ರ ನಕಾಶೆ ದಾರಿ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.08 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 40 ಲಕ್ಷವಾಗಿದೆ. ಬೇಗೂರು ಹೋಬಳಿಯ ಚಂದ್ರಶೇಖರಪುರ ಗ್ರಾಮದ ಸ.ನಂ 15ರ ಖರಾಬು ಬಂಡೆ ಬಳಿ ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.12 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ.50 ಲಕ್ಷವಾಗಿದೆ. ಇನ್ನು ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ದಾಸನಪುರ ಗ್ರಾಮದ ಸ.ನಂ 38ರ ಸರ್ಕಾರಿ ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆಯಾಗಿದ್ದು, ಅಂದಾಜು ಮೌಲ್ಯ ರೂ. 5 ಕೋಟಿಯಾಗಿದೆ.
