ಬೆಂಗಳೂರು: ಬೆಳಗಾವಿಯಲ್ಲಿ ಪ್ರತಿಭಟನಾನಿರತ ಕಬ್ಬು ಬೆಳೆಗಾರರು ಮತ್ತು ರೈತ ಸಂಘಟನೆಗಳ ಜೊತೆ ಸತತ 7 ಗಂಟೆಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಟನ್ ಕಬ್ಬಿಗೆ 3,300 ರೂ ನಿಗದಿಪಡಿಸಿದ್ದಾರೆ.
ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿದ ಅವರು, ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ತಲಾ 50ರೂ ಸೇರಿಸಿ ರೈತರಿಗೆ ಟನ್ ಗೆ 3,300 ಕೊಡಲು ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿದ್ದು, ಇವುಗಳಲ್ಲಿ 11 ಸಹಕಾರಿ ಕಾರ್ಖಾನೆಗಳು ಒಂದು ಕಾರ್ಖಾನೆ ಮಾತ್ರ ಸರ್ಕಾರಿಯಾಗಿದೆ. ಉಳಿದವೆಲ್ಲಾ ಖಾಸಗಿ ಸಕ್ಕರೆ ಕಾರ್ಖಾನೆಗಳಾಗಿದ್ದು ಆದ್ದರಿಂದ ಬೆಲೆ ನಿಗದಿಪಡಿಸಲು ತಡವಾಯಿತು ಎಂದು ಹೇಳಿದರು.
ಅಕ್ಟೋಬರ್ 30ರಿಂದ ಬೆಳಗಾವಿ ರೈತರು ಕೇಂದ್ರ ಸರ್ಕಾರದ ಎಫ್.ಆರ್.ಪಿ ದರ ವಿರೋಧಿಸಿ ಇನ್ನೂ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನಾ ನಿರತ ರೈತ ಮುಖಂಡರ ಜೊತೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸಚಿವರನ್ನು ಮಾತುಕತೆಗೆ ಕಳುಹಿಸಿದ್ದೆ ಎಂದರು.
10.25 ಇಳುವರಿ ಇರುವ ಕಬ್ಬಿಗೆ 3,100 ರೂ, 11.25 ಇಳುವರಿ ಕಬ್ಬಿಗೆ 3,200 ರೂ ಕೊಡುವುದಾಗಿ ತಿಳಿಸಿದ್ದರು. ಇದಕ್ಕೆ ಪ್ರತಿಭಟನಾ ರೈತರು ಒಪ್ಪಿಲ್ಲ. ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮಾತುಕತೆ ನಡೆಸಿದರೂ ರೈತರು ಒಪ್ಪಲಿಲ್ಲ. ಬಳಿಕ ಕ್ಯಾಬಿನೆಟ್ ನಲ್ಲಿ ಚರ್ಚಿಸಿ, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಜೊತೆ ಚರ್ಚೆ ನಡೆಸುವ ಜೊತೆಗೆ ಸಮಸ್ಯೆ ಸೃಷ್ಟಿಸಿರುವ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿತ್ತು ಎಂದು ಹೇಳಿದರು.
ಕ್ಯಾಬಿನೆಟ್ ತೀರ್ಮಾನದಂತೆ ಇಂದು ಬೆಳಗ್ಗೆಯಿಂದ ಸತತ 7 ಗಂಟೆ ಕಾಲ ಸಭೆ ನಡೆಸಿದ್ದೇವೆ. ಈ ವೇಳೆ ಕಾರ್ಖಾನೆ ಮಾಲೀಕರು ಮತ್ತು ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇಬ್ಬರೂ ಕೇಂದ್ರ ಸರ್ಕಾರದ ನೀತಿಗಳಿಂದ ಆಗಿರುವ ನಷ್ಟ ಮತ್ತು ಸಮಸ್ಯೆಗಳನ್ನೂ ಹೇಳಿಕೊಂಡಿದ್ದಾರೆ. ಕೇಂದ್ರದಿಂದ ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಲು ಕೇಂದ್ರಕ್ಕೆ ನಿಯೋಗ ತೆರಳಬೇಕು ಎಂದು ತೀರ್ಮಾನಿಸಿದ್ದೇವೆ. ಇದಕ್ಕೆ ಮಾಲೀಕರುಗಳೂ ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

