News

ಮೂರು ದಿನಗಳ ರೈತ ಸ್ನೇಹಿ ಕಡಲೆಕಾಯಿ ಪರಿಷೆಗೆ ಚಾಲನೆ

Share It

ಬೆಂಗಳೂರು: ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸನ್ನಿಧಾನದಲ್ಲಿ ಕಾಡು ಮಲ್ಲೇಶ್ವರ ಗೆಳಯರ ಬಳಗದ ಸಹಯೋಗದಲ್ಲಿ ಮೂರು ದಿನಗಳ 9ನೇ ವರ್ಷದ ರೈತ ಸ್ನೇಹಿ ಕಡಲೆಕಾಯಿ ಪರಿಷೆ ಮತ್ತು ಹುಣ್ಣಿಮೆ ಹಾಡು ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾನುವಾರ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿರವರು, ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಟಿ.ಎ.ಶರವಣ ಮತ್ತು ಕಾಡು ಮಲ್ಲೇಶ್ವರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ಉಪಾಧ್ಯಕ್ಷೆ ಲೀಲಾ ಸಂಪಿಗೆ, ಸಮಾಜ ಸೇವಕ ಅನೂಪ್ ಅಯ್ಯಂಗಾರ್, ಶ್ರೀವಲ್ಲಭ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಪರಿಷೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ದೇವಾಲಯ ಅಭಿವೃದ್ದಿಗೆ ನಮ್ಮ ಸರ್ಕಾರ ದೃಢ ಸಂಕಲ್ಪ ಮಾಡಿದೆ. ಬಸವನಗುಡಿಯಲ್ಲಿ ಐದು ದಿನಗಳ ಕಾಲ ಮತ್ತು ಮಲ್ಲೇಶ್ವರನಲ್ಲಿ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ ಮುಜರಾಯಿ ಇಲಾಖೆ ವತಿಯಿಂದ ನಡೆಯುತ್ತಿದೆ. ಬೇರೆ ದೇವಸ್ಥಾನಗಳು ಪರಿಷೆ ಮಾಡುತ್ತೇವೆ ಎಂದರೆ ಆರ್ಥಿಕವಾಗಿ ಸಹಕಾರ ನೀಡಲಾಗುವುದು ಎಂದರು.

ಮಲ್ಲೇಶ್ವರ ಕಡಲೆಕಾಯಿ ಪರಿಷೆಯಲ್ಲಿ ರೈತರಿಗೆ ಸುಂಕ ವಿಧಿಸುತ್ತಿಲ್ಲ. 1ಲಕ್ಷಕ್ಕೂ ಅಧಿಕ ಬಟ್ಚೆ , ಪೇಪರ್ ಬ್ಯಾಗ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಮುಂಬರುವ ಬಸವನಗುಡಿಯ ಪರಿಷೆಯನ್ನು 17ನೇ ತಾರೀಖು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ. ಬಸವನಗುಡಿ ಮತ್ತು ಮಲ್ಲೇಶ್ವರ ಕಡಲೆಕಾಯಿ ಪರಿಷೆ ನಗರ ಸಂಸ್ಕೃತಿ ಸಂಪ್ರಾದಯದ ಕೀರ್ತಿ ಎತ್ತಿ ಹಿಡಿಯುತ್ತಿದೆ. ಇನ್ನು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡಿದ್ದರಿಂದ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಭಕ್ತರು ಭೇಟಿ ನೀಡುವ ಸಂಖ್ಯೆ ಹೆಚ್ಚಾಗಿದೆ ಇದರಿಂದ ದೇವಾಲಯ ಅದಾಯ ಮತ್ತು ದೇವಾಲಯ ಸುತ್ತಮುತ್ತಲು ವ್ಯಾಪಾರ ಮಾಡುವವರು ಸಹ ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಹೇಳಿದರು.

ಬಿ.ಕೆ.ಶಿವರಾಂ ಮಾತನಾಡಿ ಕಡಲೆಕಾಯಿ ಪರಿಷೆ ಪ್ರಯುಕ್ತ ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರದಿಂದ ರೈತರು ಆಗಮಿಸಿದ್ದಾರೆ ಅವರಿಗೆ ಮಾರಾಟ ಮಾಡಲು ಉಚಿತವಾಗಿ ಅವಕಾಶ ನೀಡಲಾಗಿದೆ. 400ಕ್ಕೂ ಹೆಚ್ಚು ಮಳಿಗೆಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಪ್ಲಾಸ್ಟೀಕ್ ಮುಕ್ತ ಮಲ್ಲೇಶ್ವರ ಅಭಿಯಾನ ಮೂಲಕ 1ಲಕ್ಷ ಬಟ್ಟೆ ಮತ್ತು ಪೇಪರ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇಂದಿನ ಯುವ ಸಮುದಾಯ ನಮ್ಮ ಸಂಸ್ಕೃತಿ, ಸಂಪ್ರಾದಯ ಮರೆಯಬಾರದು ಇದು ಕಡಲೆಕಾಯಿ ಪರಿಷೆ ಕಾರ್ಯಕ್ರಮದ ಉದ್ದೇಶ ಎಂದರು.


Share It

You cannot copy content of this page