ದೆಹಲಿ: ಮುದ್ರಿತ ಕಾಗದಗಳಲ್ಲಿ ಅಥವಾ ಪೇಪರ್ ಗಳಲ್ಲಿ ತಿಂಡಿ-ತಿನಿಸು ಕಟ್ಟಿಕೊಡಬಾರದು, ಈ ನಿಯಮ ಮೀರಿದರೆ ಭಾರೀ ದಂಡ ವಿಧಿಸಲಾಗುತ್ತದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್ಎಐ) ಮಾರಾಟಗಾರರಿಗೆ ಎಚ್ಚರಿಸಿದೆ.
ಹಾಗೆಯೇ, ವ್ಯಾಪಾರಸ್ಥರು ಕೂಡಲೇ ಪೇಪರ್ ಗಳಲ್ಲಿ ಆಹಾರ ಪದಾರ್ಥಗಳನ್ನು ಹಾಕಿ ಕೊಡುವುದು, ಕಟ್ಟಿ ಕೊಡುವುದು, ಸಂಗ್ರಹಿಸುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದೆ.
ಆಹಾರವನ್ನು ಮುದ್ರಿತ ಕಾಗದಗಳಲ್ಲಿ ಕೊಟ್ಟಾಗ ಅದರಲ್ಲಿನ ಎಣ್ಣೆ ಪೇಪರ್ ನ ಇಂಕ್ ಜೊತೆಗೆ ಬೆರೆತು ಅನೇಕ ಜನರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಹೀಗಾಗಿ, ಮಾರಾಟಗಾರರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಮಲಾ ವರ್ಧನಾ ರಾವ್ ತಿಳಿಸಿದ್ದಾರೆ.
ಈ ನಿಯಮಾವಳಿಗಳನ್ನು ರಾಜ್ಯ ಆಹಾರ ಸುರಕ್ಷತೆ ಸಕ್ಷಮ ಪ್ರಾಧಿಕಾರಗಳ ಜೊತೆ ಸೇರಿ ಜಂಟಿಯಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿರುವ ಪ್ರಾಧಿಕಾರ ಪತ್ರಿಕೆ ಬದಲಿಗೆ ಆರೋಗ್ಯಕರವಾದ ಇತರ ಉತ್ಪನ್ನಗಳನ್ನು ಬಳಸಬೇಕು ಎಂದು ಮಾರಾಟಗಾರರಿಗೆ ಸಲಹೆ ನೀಡಿದೆ.
