News

ಭಯೋತ್ಪಾದಕರ ಓಲೈಕೆಗಾಗಿ ಜೈಲಿನಲ್ಲಿ ಐಷಾರಾಮಿ ಸೌಲಭ್ಯ: ಆರ್‌.ಅಶೋಕ್

Share It

ಬೆಂಗಳೂರು: ಭಯೋತ್ಪಾದಕರನ್ನು ಓಲೈಕೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ, ಅವರಿಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ರೇಸ್‌ ಕೋರ್ಸ್‌ ರಸ್ತೆ ಬಳಿ ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವಿಭಜನೆ ಮಾಡುವ, ಹಿಂದೂಗಳನ್ನು ಕೊಲ್ಲುವ ಭಯೋತ್ಪಾದಕರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಆದಾಗ ಅವರನ್ನು ಬ್ರದರ್‌ ಎಂದರು. ಪಾಕಿಸ್ತಾನ ಜಿಂದಾಬಾದ್‌ ಎಂದವರಿಗೆ ಬಿರಿಯಾನಿ ಊಟ ಹಾಕಿಸಿದ್ದರು. ಕಾಂಗ್ರೆಸ್‌ ಪರೋಕ್ಷವಾಗಿ ಉಗ್ರರಿಗೆ ಬೆಂಬಲ ನೀಡುತ್ತಿದೆ. 5 ಕೋಟಿ ರೂ. ಖರ್ಚು ಮಾಡಿ, ಜೈಲಿನಲ್ಲಿ ನೂರಾರು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದರೂ, ಅವುಗಳನ್ನು ಆಫ್‌ ಮಾಡಲಾಗಿದೆ. ಒಂದೇ ಬಾರಿಗೆ ಎಲ್ಲ ಕ್ಯಾಮರಾಗಳು ಆಫ್‌ ಆಗಿದ್ದು ಹೇಗೆ ಎಂದು ಪ್ರಶ್ನಿಸಿದರು.

ಜೈಲಿನೊಳಗೆ ಬಾಂಬ್‌, ಮಾಂಸ, ಗಾಂಜಾ. ಮೊಬೈಲ್‌ ಹೋಗುವುದು ಗೊತ್ತಾಗುವುದಿಲ್ಲ. ಕೈದಿಗಳು ಟಿವಿಯಲ್ಲಿ ಐಟಂ ಸಾಂಗ್‌ ನೋಡುವುದು ತಿಳಿಯುವುದಿಲ್ಲ. ಗುಪ್ತಚರ ತಂಡಕ್ಕೆ ಮಾಹಿತಿ ಸಿಗುವುದಿಲ್ಲ. ಕೈದಿಗಳು ಮೊಬೈಲ್‌ ಬಳಸಿ ಬ್ಲಾಕ್‌ಮೇಲ್‌ ಮಾಡುತ್ತಿದ್ದು, ಅದರಿಂದ ಹಣ ಸಂಪಾದಿಸುತ್ತಿದ್ದಾರೆ. ಪೊಲೀಸರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಉಗ್ರರನ್ನು ಫ್ರೀಯಾಗಿ ಬಿಟ್ಟಿದೆ. ಗ್ಯಾರಂಟಿಗಳಂತೆಯೇ ಜೈಲಿನಲ್ಲಿ ರಾಜಾತಿಥ್ಯ ಉಚಿತವಾಗಿ ದೊರೆಯುತ್ತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ವರ್ಷಗಳಲ್ಲಿ ಜೈಲಿಗೆ ಸಂಬಂಧಿಸಿದ ವರದಿ ತರಿಸಿಕೊಂಡಿಲ್ಲ. ನಟ ದರ್ಶನ್‌ ಸಿಗರೇಟು ಸೇದಿದ್ದಕ್ಕೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಆದರೆ ಭಯೋತ್ಪಾದಕರ ವಿರುದ್ಧ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಲಿ. ಇದು ಕಾಂಗ್ರೆಸ್‌ ಪ್ರಾಯೋಜಿತವಾದ ಕೃತ್ಯ. ಮುಸ್ಲಿಮರ ವಿರುದ್ಧ ಮೃದುವಾದ ಧೋರಣೆಯಿಂದಾಗಿ ಹೀಗೆಲ್ಲ ಆಗುತ್ತಿದೆ. ಇದು ಇಡೀ ಕರ್ನಾಟಕಕ್ಕೆ ಕೆಟ್ಟ ಹೆಸರು ತಂದಿದೆ. ಬಿಹಾರದಲ್ಲೂ ಇಂತಹ ಪರಿಸ್ಥಿತಿ ಇಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಕಚ್ಚಾಟದಲ್ಲಿ ಎಲ್ಲರೂ ನಿರತರಾಗಿದ್ದಾರೆ. ಇದರ ನಡುವೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಏನೂ ಕೆಲಸ ಮಾಡುತ್ತಿಲ್ಲ. ಪೊಲೀಸ್‌ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಹೇಳಿದರು.


Share It

You cannot copy content of this page