News

ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಪ್ರಗತಿ ಹೆಚ್ಚಿಸಿ: ಆಯುಕ್ತ ಡಾ. ಕೆ ವಿ ರಾಜೇಂದ್ರ

Share It

ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಪ್ರಗತಿ ಹೆಚ್ಚಿಸಬೇಕು ಎಂದು ಆಯುಕ್ತ ಡಾ. ಕೆ ವಿ ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಪಶುಪಾಲನಾ ವಿಭಾಗದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಬೀದಿ ನಾಯಿ ಆವಳಿ ಮೇಲಿನ ಮೊಕದ್ದಮೆಯ ಆದೇಶದ ಅನುಪಾಲನೆಗೆ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲಾಖೆಯು ಇರುವ ವ್ಯವಸ್ಥೆಯಲ್ಲಿ ಗಮನಾರ್ಹವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಯನಿರ್ವಣೆಯ ಕ್ಷಮತ ಹೆಚ್ಚಿಸಿ ಕಾರ್ಯ ಸಾಧನೆಯನ್ನು ಉತ್ತಮಗೊಳಿಸಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಎ.ಡಬ್ಲ್ಯೂ.ಬಿ.ಐ ಮಾನದಂಡದಂತೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 63,340 ಸಮುದಾಯ ಶ್ವಾನಗಳಿವೆ. ವಲಯಕ್ಕೆ ಒಂದರಂತೆ ಎರಡು ಎಬಿಸಿ -ಎ.ಆರ್‌.ವಿ ಕೇಂದ್ರಗಳಲ್ಲಿ ಒಟ್ಟಾರೆ 171 ಶ್ವಾನ ಸಾಮರ್ಥ್ಯದ ಕೊಠಡಿಗಳಿವೆ. ಇಬ್ಬರು ಸೇವಾದಾರರ ಮುಖಾಂತರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಒಟ್ಟಾರೆ 4,068 ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ, 27,581 ನಾಯಿಗಳಿಗೆ ಎ.ಆರ್.ವಿ ಹಾಗೂ ಸಿ.ವಿ ಲಸಿಕೆಯನ್ನು ನೀಡಲಾಗಿದೆ ಎಂದು ಸಭೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ. ಕೆ ವಿ ರಾಜೇಂದ್ರ ಆಯುಕ್ತ ಎಬಿಸಿ – ಎ. ಆರ್.ವಿ ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಸೇವಾದಾರರು ಪಾಲ್ಗೊಳ್ಳುವಂತೆ ಅವಕಾಶ ನೀಡಲು ನಿಯಮಗಳ ಸರಳೀಕರಣ ಗೊಳಿಸುವಂತೆ ಎ.ಡಬ್ಲ್ಯೂ.ಬಿ.ಐ ರವರಿಗೆ ಮನವಿ ಸಲ್ಲಿಸಬೇಕು. ದೀರ್ಘಕಾಲದ ನಿಗಾ ಘಟಕದಲ್ಲಿ ಇರಿಸಿರುವ ಶ್ವಾನಗಳನ್ನು ಸಾಧ್ಯವಾದಷ್ಟು ದತ್ತು ಕಾರ್ಯಕ್ರಮದಲ್ಲಿ ಸೇರಿಸಬೇಕು. ಶ್ವಾನಗಳಿಗೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸಬೇಕು. ಎಲ್ಲಾ ಇಲಾಖೆ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವಂತೆ ತಿಳುವಳಿಕೆ ಕಾರ್ಯಕ್ರಮಗಳನ್ನು ಕೈಗೊಳ್ಳಲು, ಎ.ಬಿ.ಸಿ – ಎ.ಆರ್.ವಿ ಕಾರ್ಯಕ್ರಮದ ಉಳಿಕೆ ಬಿಲ್ಲುಗಳನ್ನು ಕೂಡಲೇ ಪಾವತಿಸಬೇಕು. ಸಾರ್ವಜನಿಕರಿಗೆ ಅವಶ್ಯಕತೆ ಇರುವ ಎ.ಆರ್.ವಿ ಲಸಿಕೆಯ ದಾಸ್ತಾನನ್ನು ಪಾಲಿಕೆಯಲ್ಲಿ ಈಗಾಗಲೇ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತೀವ್ರ ಸ್ವಚ್ಛತಾ ಅಭಿಯಾನ ನಡೆಸಿ:

ಪಶ್ಚಿಮ ನಗರ ಪಾಲಿಕೆಯ ಪ್ರಮುಖ ರಸ್ತೆಗಳು, ಮಾರುಕಟ್ಟೆಗಳು ಹಾಗೂ ವಸತಿ ಪ್ರದೇಶಗಳಲ್ಲಿ ತೀವ್ರ ಸ್ವಚ್ಛತೆ ಮತ್ತು ಬೀದಿ ಗುಡಿಸುಚ ಕಾರ್ಯ ಕೈಗೊಂಡು, ಕಸದ ರಾಶಿ ಮತ್ತು ಬ್ಲ್ಯಾಕ್‌ಸ್ಪಾಟ್‌ ಪ್ರದೇಶಗಳನ್ನು ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದಿರಾ ಕ್ಯಾಂಟೀನ್‌ಗಳ ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಹೈಜಿನ್ ಕಾಪಾಡುವತ್ತ ವಿಶೇಷ ಗಮನ ಹರಿಸಬೇಕು. ಪೌರಕಾರ್ಮಿಕರು ಹಾಗೂ ಜೆ.ಹೆಚ್.ಐಗಳು ಸಕ್ರಿಯವಾಗಿ ಪಾಲ್ಗೊಂಡು ವಿಭಾಗ ಮಟ್ಟದಲ್ಲಿ ಪರಿಣಾಮಕಾರಿಯಾದ ಮೇಲ್ವಿಚಾರಣೆ ನಡೆಸಬೇಕು. ಒಂದು ವಾರದೊಳಗೆ ಎಲ್ಲಾ ಹೂಳನ್ನು ಹಾಗೂ ಟ್ರಾಕ್ಟರ್‌ಗಳಲ್ಲಿ ಸಂಗ್ರಹವಾದ ಕಸವನ್ನು ತೆರವುಗೊಳಿಸಲು ಮತ್ತು ವಾರ್ಡ್‌ವಾರು ಪೂರ್ಣಗೊಂಡ ಕೆಲಸದ ಪಟ್ಟಿಯನ್ನು ಆಯುಕ್ತರ ಕಚೇರಿಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ವಾರ್ಡ್ ಸ್ವಚ್ಛ ಸರ್ವೇಕ್ಷಣ ರ‍್ಯಾಂಕಿಂಗ್:

ನಗರದಲ್ಲಿ ನಿರಂತರ ಸ್ವಚ್ಛತೆ ಕಾಪಾಡಲು ವಾರ್ಡ್ ಸ್ವಚ್ಛ ಸರ್ವೇಕ್ಷಣ ರ‍್ಯಾಂಕಿಂಗ್ ಯೋಜನೆಯನ್ನು ಪ್ರತಿ ತಿಂಗಳು ಜಾರಿಗೊಳಿಸಲಾಗುತ್ತದೆ. ವಾರ್ಡ್‌ಗಳ ಸ್ವಚ್ಛತೆ ಪ್ರಮಾಣ ಮತ್ತು ಕಾರ್ಯದಕ್ಷತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್‌ಗಳು ನೀಡಲಾಗುತ್ತವೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಆಯುಕ್ತ ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತ ಸಂಗಪ್ಪ, ಆರತಿ ಆನಂದ್, ಮುಖ್ಯ ಪಶು ವೈದ್ಯಾಧಿಕಾರಿಯಾದ ಡಾ. ವೆಂಕಟೇಶ್, ಬೆಂ.ಘ.ತ್ಯಾ.ನಿ ನಿಯಮಿತದ ಡಿಜಿಎಂ, ಎಜಿಎಂ, ಸೇರಿದಂತೆ ಮತ್ತಿತರರು ಹಾಜರಿದ್ದರು.


Share It

You cannot copy content of this page