ನೀನು ‘ಒಳ್ಳೆ ಫಿಗರ್’ ಎಂದು ಹೇಳುವುದು ಕೂಡ ಲೈಂಗಿಕ ಕಿರುಕುಳ ವ್ಯಾಪ್ತಿಗೆ ಬರುತ್ತದೆ ಎಂದು ಮುಂಬೈ ಕೋರ್ಟ್ ಅಭಿಪ್ರಾಯಪಟ್ಟಿದೆ.
ನೀನು ಒಳ್ಳೆಯ ಫಿಗರ್, ಚೆನ್ನಾಗಿ ಫಿಗರ್ ಮೇಂಟೇನ್ ಮಾಡಿದ್ದೀಯ, ನನ್ನೊಂದಿಗೆ ಹೊರಗೆ ಬರುತ್ತೀಯಾ ಎಂದು ಸಹೋದ್ಯೋಗಿ ಮಹಿಳೆಗೆ ಹೇಳಿದ್ದ ವ್ಯಕ್ತಿಗೆ ಜಾಮೀನು ನಿರಾಕರಿಸುವ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜತೆಗೆ ಈ ಕುರಿತ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.
ಜಾಮೀನು ನಿರಾಕರಿಸುವ ವೇಳೆ, ಇದೊಂದು ಗಂಭೀರ ಸ್ವರೂಪದ ಪ್ರಕರಣ. ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಪ್ರಕರಣಗಳಲ್ಲಿ ಆರೋಪಿಯನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸುದು ಸೂಕ್ತ. ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ರಿಯಲ್ ಎಸ್ಟೇಟ್ ಕಚೇರಿಯೊಂದರಲ್ಲಿ ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುವ 30 ವರ್ಷದ ಮಹಿಳೆ ಅದೇ ಕಚೇರಿಯ 42 ವರ್ಷದ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ 30 ವರ್ಷದ ಸೇಲ್ಸ್ ಮ್ಯಾನೇಜರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ, ಅಸಿಸ್ಟೆಂಟ್ ಮ್ಯಾನೇಜರ್ ತಮಗೆ ಮೇಡಂ, ನೀವು ಒಳ್ಳೆಯ ಫಿಗರ್ ಮೇಂಟೇನ್ ಮಾಡಿದ್ದೀರಿ. ನಿಮ್ಮ ಫಿಗರ್ ಬಹಳ ಚೆನ್ನಾಗಿದೆ. ನನ್ನೊಂದಿಗೆ ಹೊರಗೆ ಬರುವಿರಾ ಎಂದು ಕೇಳಿದ್ದರೆಂದು ಆರೋಪಿಸಿದ್ದರು.
ಸಹೋದ್ಯೋಗಿ ಮಹಿಳೆಗೆ ಕಿರುಕುಳ ನೀಡಿದ ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 354ಎ, 354ಡಿ, 509, 34 ರ ಅಡಿ ಎಫ್ಐಆರ್ ದಾಖಲಿಸಿದ್ದರು.

