ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಎರ್ನಾಕುಲಂ ಉತ್ತರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಕೆ. ಸೈಜು ಎಂಬುವರನ್ನು ಎರ್ನಾಕುಲಂ ನಗರ ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.
ಪೊಲೀಸ್ ಅಧಿಕಾರಿ ಸೈಜು 2023 ರ ಜುಲೈ 13 ರಂದು ವಕೀಲ ಶ್ರೀನಾಥ್ ಸಿ.ವಿ ಹಾಗೂ ಅವರ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ವಕೀಲರಿಗೆ ಪಿಐಎಸ್ ಸೈಜು ನಿಂದಿಸಿದ್ದರು. ಇದಕ್ಕೂ ಮುನ್ನ ಜುಲೈ 8 ರಂದು ಇದೇ ಅಧಿಕಾರಿ ವಕೀಲ ಶ್ರೀಕಾಂತ್ ಎಂಬುವರ ಮೇಲೂ ಹಲ್ಲೆ ಮಾಡಿದ್ದರೆನ್ನಲಾಗಿತ್ತು.
ಅಧಿಕಾರಿಯ ದುರ್ನಡತೆ ಹಾಗೂ ಅಧಿಕಾರ ದುರುಪಯೋಗ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಎರ್ನಾಕುಲಂ ನಗರ ಪೊಲೀಸ್ ಆಯುಕ್ತರು ಪಿಎಸ್ಐ ಸೈಜುವನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಕೇರಳ ಹೈಕೋರ್ಟ್ ವಕೀಲರ ಸಂಘವು ಪೊಲೀಸ್ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತಂತೆ ಸಭೆ ನಡೆಸಲು ಮುಂದಾಗಿದೆ. ಸಾರ್ವಜನಿಕರ ಮೇಲೆ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಪುನರಾವರ್ತನೆಯಾಗುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಇದನ್ನು ತಪ್ಪಿಸಲು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜಾರಿಗಳಿಸುವ ಕುರಿತು ನಿರ್ಣಯ ಕೈಗೊಳ್ಳಲು ಸಂಘ ಮುಂದಾಗಿದೆ.

