News

ಮಧ್ಯ ಏಷ್ಯಾ ದೇಶಗಳಿಗೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡಲು ಕ್ರಮ: ಶೋಭಾ ಕರಂದ್ಲಾಜೆ

Share It

ಬೆಂಗಳೂರು: ಮಧ್ಯ ಏಷ್ಯಾ ದೇಶಗಳಿಗೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡಲು ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಎಂಎಸ್‌ಎಂಇ, ಉದ್ಯೋಗ, ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಹೆಬ್ಬಾಳದ ಜಿಕೆವಿಕೆಯ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ‘ಸಮೃದ್ಧ ಕೃಷಿ – ವಿಕಸಿತ ಭಾರತ: ನೆಲ, ಜಲ ಮತ್ತು ಬೆಳೆ’ ಶೀರ್ಷಿಕೆಯಡಿಯಲ್ಲಿ ಏರ್ಪಡಿಸಲಾಗಿರುವ ನಾಲ್ಕು ದಿನಗಳ ಕೃಷಿ ಮೇಳ ದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಧ್ಯ ಏಷ್ಯಾ ರಾಷ್ಟ್ರಗಳು ಸೀಮಿತ ಬೆಳೆಗಳನ್ನು ಮಾತ್ರ ಬೆಳೆಯುವುದರಿಂದ ನಮ್ಮಲ್ಲಿನ ಆಹಾರ ಉತ್ಪನ್ನಗಳು ಅವರಿಗೆ ಅನಿವಾರ್ಯವಾಗಿವೆ, ಹಾಗಾಗಿ ರಫ್ತು ಹೆಚ್ಚಳ ಲಾಭದಾಯಕವಾಗಿದೆ ಎಂದು ಹೇಳಿದರು.

ಒಂದು ಕಾಲದಲ್ಲಿ ಭಾರತವು ಆಹಾರಕ್ಕಾಗಿ ಅಮೆರಿಕವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ನಮ್ಮ ದೇಶದ ಕೃಷಿ ಕ್ಷೇತ್ರದಲ್ಲಿನ ಸಾಕಷ್ಟು ಪ್ರಗತಿ ಮತ್ತು ರೈತರ ಪರಿಶ್ರಮದಿಂದ ಇಂದು ಬೇರೆ ರಾಷ್ಟ್ರಗಳಿಗೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುವಂತಹ ಮಟ್ಟಕ್ಕೆ ಕೃಷಿಯಲ್ಲಿ ಪ್ರಗತಿ ಸಾಧಿಸಿದ್ದೇವೆ. ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಕೃಷಿ ಉತ್ಪನ್ನಗಳು ಸೇರಿ ಪ್ರಮುಖ ಆಹಾರ ಸಿದ್ಧ ಉತ್ಪನ್ನಗಳನ್ನು ರಫ್ತು ಮಾಡಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕೃಷಿ ಮತ್ತು ಇದನ್ನು ಅಲಂಬಿಸಿದ ಕ್ಷೇತ್ರಗಳತ್ತ ಸಾಕಷ್ಟು ಯುವ ಸಮೂಹ ದಾಪುಗಾಲಿಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಐಟಿ-ಬಿಟಿ ಮತ್ತು ಇನ್ನಿತರೆ ಔದ್ಯೋಗಿಕ ವಲಯದಲ್ಲಿ ಇರುವವರು ಕೂಡ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿರುವುದು ಬೆಳವಣಿಗೆಯ ವಿಷಯವಾಗಿದೆ. ಕೃಷಿಯಿಂದ ಮಾತ್ರ ನೆಮ್ಮದಿ ಬದುಕು ಸಾಧ್ಯ ಎಂಬುದನ್ನು ಸಾಕಷ್ಟು ಮಂದಿ ರೈತರು ಸಾಧಿಸಿ ತೋರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್ ಹಾಗೂ ಇತರರಿದ್ದರು.


Share It

You cannot copy content of this page