ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಜೈಪುರ: ಕ್ರಿಮಿನಲ್ ಪ್ರಕರಣಗಳಲ್ಲಿ ಜಪ್ತಿ ಮಾಡಿದ ಸ್ವತ್ತುಗಳನ್ನು ನಾಶವಾಗಲು ಬಿಡಬಾರದು. ಅಂತಹ ಸ್ವತ್ತುಗಳ ನಿರ್ವಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಸಿಆರ್ಪಿಸಿ ಸೆಕ್ಷನ್ 451ರ ಅಡಿ ಅಧಿಕಾರವನ್ನು ತ್ವರಿತವಾಗಿ ಚಲಾಯಿಸುಬೇಕು ಎಂದು ರಾಜಸ್ಥಾನ ಹೈಕೋರ್ಟ್ ಆದೇಶಿಸಿದೆ.
ಎನ್‌ಡಿಪಿಎಸ್ ಕಾಯ್ದೆ ಅಡಿ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಜಪ್ತಿ ಮಾಡಿರುವ ಕಾರನ್ನು ಬಿಡುಗಡೆ ಮಾಡುವಂತೆ ಕೋರಿ ಅರ್ಜಿದಾರ ಕನಿರಾಮ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿಲ್ ಕುಮಾರ್ ಉಪ್ಮಾನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕ್ರಿಮಿನಲ್ ಪ್ರಕರಣಗಳಲ್ಲಿ ಜಪ್ತಿ ಮಾಡಿದ ಸ್ವತ್ತುಗಳನ್ನು ವಿಚಾರಣೆ ಬಾಕಿ ಇದ್ದಾಗ ಅವುಗಳ ಕಸ್ಟಡಿ ವಿಚಾರವಾಗಿ ಅರ್ಜಿ ಸಲ್ಲಿಸಿದಾಗ, ನ್ಯಾಯಾಲಯಗಳು ಸಿಆರ್ಪಿಸಿ ಸೆಕ್ಷನ್ 451 ಅಡಿ ನೀಡಿರುವ ಅಧಿಕಾರವನ್ನು ತ್ವರಿತವಾಗಿ ಚಲಾಯಿಸಬೇಕು. ಸ್ವತ್ತು ಬಳಕೆಯಾಗದೆ ದಿನದಿಂದ ದಿನಕ್ಕೆ ಹಾಳಾಗುವ ಸಾಧ್ಯತೆ ಇದ್ದಾಗ, ಪೊಲೀಸರು ಅದನ್ನು ಸುರಕ್ಷಿತವಾಗಿ ಇರಿಸಲು ಸಾಧ್ಯವಿಲ್ಲ ಎನ್ನಿಸಿದಾಗ ಸೂಕ್ತ ಭದ್ರತೆ ಪಡೆದು ಅದನ್ನು ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಹಾಗೆಯೇ, ಕಾರಿನ ಮಾಲಿಕರು ಹೈಪೋಥಿಕೇಷನ್ ಡೀಡ್ ಪತ್ರ ನೀಡಬೇಕು ಮತ್ತು 10 ಸಾವಿರ ರೂಪಾಯಿ ಬಾಂಡ್ ನೀಡಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ವಾಹನವನ್ನು ಮಾರಾಟ ಮಾಡಬಾರದು. ಯಾವುದೇ ಕಾನೂನು ಬಾಹಿರ ಉದ್ದೇಶಕ್ಕೆ ವಾಹನ ಬಳಸಬಾರದು. ಕೇಳಿದಾಗಲೆಲ್ಲಾ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ವಾಹನ ಬಿಡುಗಡೆಗೆ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕಾರು ಬಳಕೆಯಾಗದೆ ನಿಂತಲ್ಲೇ ನಿಂತಿರುವುದರಿಂದ ಅದು ಹಾಳಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಧೀರ್ಘ ಕಾಲ ಇರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ವಾಹನ ವಾಹನ ಬಳಕೆಯಾಗದೇ ನಾಶವಾಗುವ ಮುನ್ನ ಅದರ ಸ್ವಾಧೀನವನ್ನು ವಾಹನದ ಮಾಲಿಕರಾದ ಅರ್ಜಿದಾರರಿಗೆ ನೀಡಬೇಕು ಎಂದು ಮನವಿ ಮಾಡಿದ್ದರು.
(S.B. Criminal Miscellaneous (Petition) No. 1993/2024)

