Law

ಪ್ರತಿಫಲ ಪಡೆದು ಆಸ್ತಿ ವರ್ಗಾಯಿಸಿದ್ದಾಗ ವರ್ಗಾವಣೆ ರದ್ದುಗೊಳಿಸಲಾಗದು: ಹೈಕೋರ್ಟ್

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.

ಆರೈಕೆ ಮಾಡುವ ಕುರಿತು ಯಾವುದೇ ಷರತ್ತುಗಳನ್ನು ವಿಧಿಸದೇ, ಪ್ರತಿಫಲ ಪಡೆದು ಆಸ್ತಿಯ ಸಂಪೂರ್ಣ ವರ್ಗಾವಣೆ ಮಾಡಿದ ನಂತರ “ಪೋಷಕರು ಮತ್ತು ಹಿರಿಯ ನಾಕರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007” ರ ಸೆಕ್ಷನ್ 23 ರ ಅಡಿ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಆಸ್ತಿ ವರ್ಗಾವಣೆಯನ್ನು ಹಿರಿಯ ನಾಗರಿಕರ ಕಾಯ್ದೆ ಅಡಿ ರದ್ದುಪಡಿಸಿ ಉಪವಿಭಾಗಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ,

ಪ್ರಕರಣದ ಹಿನ್ನೆಲೆ: ಧಾರವಾಡ ನಿವಾಸಿಯಾದ 72 ವರ್ಷದ ಮಹಿಳೆ ತನ್ನ ಪುತ್ರ ಹಾಗೂ ಸೊಸೆಗೆ ನಗರದ ಮುಖ್ಯ ರಸ್ತೆಯಲ್ಲಿನ ನಿವೇಶನವನ್ನು 2018ರಲ್ಲಿ ವರ್ಗಾವಣೆ ಮಾಡಿದ್ದರು. ಇದಕ್ಕೆ ಮಹಿಳೆ ಹಾಗೂ ಅವರ ಸಹೋದರಿ ಅನುಕ್ರಮವಾಗಿ 8.30 ಲಕ್ಷ ರೂ. ಹಾಗೂ 1.30 ಲಕ್ಷ ರೂಪಾಯಿ ಪಡೆದಿದ್ದರು. ಕೆಲ ವರ್ಷಗಳ ಬಳಿಕ ಮಗ-ಸೊಸೆ ತಮ್ಮನ್ನು ಸರಿಯಾಗಿ ಆರೈಕೆ ಮಾಡುತ್ತಿಲ್ಲ. ಹೀಗಾಗಿ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಬೇಕು ಎಂದು ಕೋರಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ದೂರಿನ ವಿಚಾರಣೆ ಮಾಡಿದ ಉಪವಿಭಾಗಾಧಿಕಾರಿ ಮಹಿಳೆಯ ಆಸ್ತಿಯನ್ನು ಆಕೆಯ ಪುತ್ರ ಹಾಗೂ ಸೊಸೆ ಬಲವಂತವಾಗಿ ಮತ್ತು ತಪ್ಪು ನಿರೂಪಣೆಯಿಂದ ಪಡೆದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು. ಜತೆಗೆ, 2020ರ ಜೂನ್ 26 ರಂದು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಸೆಕ್ಷನ್ 23 ರ ಪ್ರಕಾರ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಿ ಆದೇಶಿಸಿದ್ದರು. ಎಸಿ ಆದೇಶ ಪ್ರಶ್ನಿಸಿ ಮಹಿಳೆಯ ಪುತ್ರ ಹಾಗೂ ಸೊಸೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ವಾದ ಪ್ರತಿವಾದ: ವಿಚಾರಣೆ ವೇಳೆ ಅರ್ಜಿದಾರ ದಂಪತಿ ಪರ ವಾದ ಮಂಡಿಸಿದ್ದ ವಕೀಲರು, ಹಣ ಪಡೆದು ಆಸ್ತಿ ವರ್ಗಾವಣೆ ಮಾಡಲಾಗಿದೆ. ಇನ್ನು ಆರೈಕೆ ಕುರಿತಂತೆ ವರ್ಗಾವಣೆ ವೇಳೆ ಯಾವುದೇ ಷರತ್ತು ವಿಧಿಸಿಲ್ಲ. ಹೀಗಾಗಿ ಕಾಯ್ದೆಯ ಸೆಕ್ಷನ್ 23 ರ ಅಡಿ ಎಸಿ ಮಾಡಿರುವ ಆದೇಶ ನಿಯಮಬಾಹಿರವಾಗಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ಪ್ರತಿವಾದಿ ವೃದ್ಧ ಮಹಿಳೆ ಪರ ವಾದಿಸಿದ್ದ ವಕೀಲರು, ಆಸ್ತಿ ವರ್ಗಾವಣೆ ವೇಳೆ ಆರೈಕೆ ಕುರಿತು ಯಾವುದೇ ಷರತ್ತು ಉಲ್ಲೇಖಿಸದಿದ್ದರೂ ಅವರನ್ನು ಆರೈಕೆ ಮಾಡುವುದು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಅರ್ಜಿದಾರರ ಕರ್ತವ್ಯ. ಹೀಗಾಗಿ ಷರತ್ತು ಉಲ್ಲೇಖಿಸದಿದ್ದರೂ ಉಪವಿಭಾಗಾಧಿಕಾರಿ ಮಾಡಿರುವ ಆದೇಶ ಸರಿಯಿದೆ ಎಂದು ಎಸಿ ಕ್ರಮವನ್ನು ಸಮರ್ಥಿಸಿದ್ದರು.

ಹೈಕೋರ್ಟ್ ತೀರ್ಪು: ಮಹಿಳೆ ತಮ್ಮ ಪುತ್ರ ಹಾಗೂ ಸೊಸೆಗೆ ಆಸ್ತಿಯನ್ನು ಪ್ರೀತಿ ವಾತ್ಸಲ್ಯದ ರೂಪದಲ್ಲಿ ನೀಡುವ ಉಡುಗೊರೆ ರೂಪದಲ್ಲಿ ವರ್ಗಾಯಿಸಿಲ್ಲ. ಆಸ್ತಿ ವರ್ಗಾವಣೆ ವೇಳೆ ಮಾಲಿಕರಾದ ಪ್ರತಿವಾದಿ ಮಹಿಳೆಗೆ 8.30 ಲಕ್ಷ ರೂಪಾಯಿ ಹಾಗೂ ಅವರ ಸಹೋದರಿಗೆ 1.30 ಲಕ್ಷ ರೂಪಾಯಿ ನೀಡಲಾಗಿದೆ. ಆಸ್ತಿ ವರ್ಗಾವಣೆ ವೇಳೆ ಮಹಿಳೆಯನ್ನು ಆರೈಕೆ ಮಾಡುವ ಕುರಿತು ಷರತ್ತು ಉಲ್ಲೇಖಿಸಿಲ್ಲ. ಹೀಗಾಗಿ ಉಪವಿಭಾಗಾಧಿಕಾರಿ ಆಸ್ತಿ ವರ್ಗಾವಣೆಯನ್ನು ರದ್ದು ಮಾಡಿರುವ ಕ್ರಮ ಕಾನೂನುಬದ್ಧವಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಎಸಿ ಆದೇಶವನ್ನು ರದ್ದುಪಡಿಸಿದೆ. ಇದೇ ವೇಳೆ ಮಹಿಳೆಯು ತನ್ನ ಹಕ್ಕುಗಳಿಗಾಗಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಬಹುದು. ಅದಕ್ಕೆ ಈ ಆದೇಶ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸೆಕ್ಷನ್ 23: “ಪೋಷಕರು ಮತ್ತು ಹಿರಿಯ ನಾಕರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007” ನ್ನು ಹಿರಿಯ ನಾಗರಿಕರ ರಕ್ಷಣೆಗಾಗಿ, ಇಳಿವಯಸ್ಸಿನಲ್ಲಿ ಅವರನ್ನು ನೋಡಿಕೊಳ್ಳುವ ಬಾದ್ಯತೆಯನ್ನು ಮಕ್ಕಳಿಗೆ ಕಾನೂನುಬದ್ಧಗೊಳಿಸಲಿಕ್ಕಾಗಿಯೇ ಜಾರಿಗೆ ತರಲಾಗಿದೆ. ಕಾಯ್ದೆಯಲ್ಲಿನ ಸೆಕ್ಷನ್ 23 ರ ಪ್ರಕಾರ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ಉಡುಗೊರೆಯಾಗಿ ಅಥವಾ ದಾನಪತ್ರದ ಮೂಲಕ ವರ್ಗಾವಣೆ ಮಾಡಿದ್ದರೆ, ಅವರನ್ನು ಮಕ್ಕಳು ಆರೈಕೆ ಮಾಡದಿದ್ದಾಗ, ಅವಶ್ಯಕತೆಗಳನ್ನು ಪೂರೈಸದಿದ್ದಾಗ ಅಂತಹ ಸಂದರ್ಭದಲ್ಲಿ ಆಸ್ತಿ ವರ್ಗಾವಣೆಯನ್ನು ಬಲವಂತದಿಂದ, ಅನುಚಿತ ಪ್ರಭಾವದಿಂದ, ತಪ್ಪು ತಿಳುವಳಿಕೆಯಿಂದ, ಮೋಸದಿಂದ ಪಡೆಯಲಾಗಿದೆ ಎಂದು ಭಾವಿಸಿ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಬಹುದಾಗಿದೆ.

(WP 147066/2020)


Share It

You cannot copy content of this page