News

ಬ್ರ್ಯಾಟ್ ಸಿನಿಮಾದ ಮೂಲಕ ಯುವಜನತೆಗೆ ಜವಾಬ್ದಾರಿಯನ್ನು ತಿಳಿಹೇಳಲಾಗಿದೆ: ಡಾರ್ಲಿಂಗ್ ಕೃಷ್ಣ

Share It

ಬೆಂಗಳೂರು: ಕಾಲೇಜು ದಿನಗಳನ್ನು ನಾನು ಸಾಕಷ್ಟು ನೆನೆಯುತ್ತೇನೆ. ಈ ನಿಟ್ಟಿನಲ್ಲಿಯೇ ಬ್ರ್ಯಾಟ್ ಸಿನಿಮಾದ ಮೂಲಕ ಕೂಡ ಯುವಜನತೆಗೆ ಜವಾಬ್ದಾರಿಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದೇವೆ ಎಂದು ಚಲನಚಿತ್ರ ನಟ ಡಾರ್ಲಿಂಗ್ ಕೃಷ್ಣ ಹೇಳಿದರು.

ಶುಕ್ರವಾರ ನೃಪತುಂಗ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ನೃಪವೈಭವ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಓದು, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ವಿದ್ಯಾರ್ಥಿ ಜೀವನದ ಬಹುಮುಖ್ಯ ಕಾರ್ಯಗಳಾಗಿವೆ. ಆದರೆ ಕೆಲವರು ದುಶ್ಚಟಗಳು ಹಾಗೂ ಬೆಟ್ಟಿಂಗ್ ನಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಈ ಎಲ್ಲ ವಿಚಾರಗಳನ್ನು ಹಾಸ್ಯ, ಸಾಹಸ ದೃಶ್ಯಗಳ ಮೂಲಕ ಬ್ರ್ಯಾಟ್ ಸಿನಿಮಾದಲ್ಲಿ ತಿಳಿಹೇಳಲಾಗುತ್ತಿದೆ ಆದ್ದರಿಂದ ಸಿನೆಮಾ ನೋಡಿ ಪ್ರೋತ್ಸಾಹಿಸಬೇಕು ಎಂದರು.

ಲೇಖಕ, ಪರಿಸರವಾದಿ ಪ್ರಕಾಶ್ ಕೆ ನಾಡಿಗ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕವಾಗಿ ಬೆಳೆಯಲು ಈಗ ಅನೇಕ ವೇದಿಕೆಗಳು ಸೃಷ್ಟಿಯಾಗಿವೆ. ಸರಿಯಾದ ಗುರಿಯನ್ನು ಹೊಂದಿ ಮುನ್ನಡೆಯುವ ಪ್ರಯತ್ನವನ್ನು ಮಾಡಬೇಕು. ಯಾರಿಗೂ ಯಶಸ್ಸು ಸುಖಾ ಸುಮ್ಮನೆ ಬಂದಿಲ್ಲ ಎನ್ನುವುದನ್ನು ಮನಗಾಣಬೇಕು. ಛಲ ಬಿಡದೆ ಉತ್ತಮ ರೂಢಿಗಳನ್ನು ಬೆಳೆಸಿಕೊಂಡು ಮುನ್ನಡೆಯುವುದು ಮಾತ್ರ ಉತ್ತಮ ಜೀವನಕ್ಕೆ ರಹದಾರಿಯಾಗಿದೆ ಎಂದು ತಿಳಿಸಿದರು.

ಹಾಸ್ಯ ನಟಿ ನಯನ ಶರತ್ ಮಾತನಾಡಿ, ಈಗಿನ ಕಾಲಮಾನದಲ್ಲಿ ಸಾಕಷ್ಟು ತಂತ್ರಜ್ಞಾನ ಬೆಳೆದು ವಿದ್ಯಾರ್ಥಿಗಳು ಹಲವಾರು ಜಾಲತಾಣಗಳಲ್ಲಿ ಮುಳುಗಿಹೋಗಿದ್ದಾರೆ. ಕನ್ನಡ ಸಿನೆಮಾಗಳನ್ನು ಥಿಯಟರ್ ಗಳಿಗೆ ಹೋಗಿ ನೋಡುವುದನ್ನು ಮರೆತಿದ್ದಾರೆ. ಸಾಕಷ್ಟು ಕಷ್ಟ ಪಟ್ಟು ಸಮಯ ಹಣವನ್ನು ವ್ಯಯಿಸಿರುತ್ತಾರೆ. ಅವರ ಶ್ರಮವನ್ನು ಕೇವಲ ರೀಲ್ಸ್ ಗಳ ಮೂಲಕ ವೀಕ್ಷಿಸದೆ ಪೂರ್ತಿ ಸಿನೆಮಾಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಸಾಂಸ್ಕೃತಿ ಸಂಚಾಲಕರಾದ ಡಾ. ಹಾಲೇಶಪ್ಪ. ಆರ್. ಪ್ರಸ್ತಾವಿಕ ನುಡಿ ನುಡಿದರು. ಕಾರ್ಯಕ್ರಮದಲ್ಲಿ ಬ್ರ್ಯಾಟ್ ಸಿನಿಮಾ ನಿರ್ದೇಶಕ, ಶಶಾಂಕ್, ನಟ ಡ್ರ್ಯಾಗನ್ ಮಂಜು, ವಿಶ್ವವಿದ್ಯಾಲಯದ ಪ್ರೊ ಫಾಜಿಹಾ ಸುಲ್ತಾನ, ಕುಲಸಚಿವೆ (ಆಡಳಿತ ಮತ್ತು ಮೌಲ್ಯಮಾಪನ) ಪ್ರೊ. ಮಂಜುಳ ಎ ಸಿ, ವಿತ್ತಾಧಿಕಾರಿ ಧನಂಜಯ, ಪ್ರಾಂಶುಪಾಲ ಪ್ರೊ ಅಣ್ಣಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Share It

You cannot copy content of this page