News

ಬೇಧವಿಲ್ಲದ ಭಾವನೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿತ್ತುತ್ತಾ ಬಂದಿದೆ: ದು.ಗು ಲಕ್ಷ್ಮಣ್

Share It

ಬೆಂಗಳೂರು: ಜಾತಿ, ಮತದ ಬೇಧವಿಲ್ಲದ ಭಾವನೆಯನ್ನು ಜನರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷಗಳಿಂದ ಬಿತ್ತುತ್ತಾ ಬಂದಿದೆ. ಅಲ್ಪಸಂಖ್ಯಾತರು ಸಂಘದ ವಿರೋಧಿಗಳು ಎನ್ನುವ ಭಾವನೆಯನ್ನು ಸಮಾಜದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ದಶಕಗಳ ಕಾಲದಿಂದ ಸುಳ್ಳನ್ನು ಹಬ್ಬಿಸುತ್ತಿದ್ದಾರೆ, ಆದರೆ ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಹಿರಿಯ ಪತ್ರಕರ್ತ, ಅಂಕಣಕಾರ, ಲೇಖಕ ದು.ಗು ಲಕ್ಷ್ಮಣ್ ಹೇಳಿದರು.

ಭಾನುವಾರ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವಶಿಲ್ಪ ಸಭಾಂಗಣದಲ್ಲಿ 5ನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ಆರ್.ಎಸ್.ಎಸ್. 100: ಶತಪಥ ಸಂಚಲನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್ ಇಡೀ ಸಮಾಜದ ಸಂಘಟನೆಯಾಗಿದೆ. ಇದರ ಸ್ಥಾಪನೆಯ ಉದ್ದೇಶ ಯಾವುದೇ ರಾಜಕೀಯ ಉದ್ದೇಶದಿಂದ ಆಗಿಲ್ಲ. ಸದಾ ರಾಷ್ಟ್ರೀಯತೆಯನ್ನು ದೇಶದ ಉದ್ದಗಲಕ್ಕೂ ಪಸರಿಸುವ ಕಾರ್ಯವನ್ನು ಅನೇಕ ತ್ಯಾಗ ಬಲಿದಾನವನ್ನು ನೀಡಿ ಕಾರ್ಯಕರ್ತರು ನಡೆಸಿಕೊಂಡು ಬಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಂಘದ ಏಳಿಗೆ ಸಹಿಸಿಕೊಳ್ಳದವರು ಪಥ ಸಂಚಲನಕ್ಕೆ ಅಡ್ಡಿಪಡಿಸಲು ಮುಂದಾದರು. ಇದರಿಂದ ವಿರೋಧಿಗಳೇ ನೂರನೇ ವರ್ಷದ ಸಂಭ್ರಮಕ್ಕೆ ಹೆಚ್ಚು ಪ್ರಚಾರ ನೀಡಿದಂತಾಯಿತು. ಸಂಘವು ಯಾವುದೇ ಸರ್ಕಾರಿ ಸವಲತ್ತನ್ನು ಪಡೆದಿಲ್ಲ. ವಿದೇಶಿ ಮೂಲದ ಹಣವೂ ಬರುವುದಿಲ್ಲ, ಯಾವ ಧರ್ಮವನ್ನೂ ವಿರೋಧಿಸುವುದಿಲ್ಲ. ಅನ್ಯ ಧರ್ಮಿಯರೂ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ನಿದರ್ಶನಗಳಿವೆ. ಇದೆಲ್ಲವನ್ನು ಗಮನಿಸಿದರೇ ಸಮಾಜವೇ ಸಂಘವನ್ನು ಸ್ವೀಕಾರ ಮಾಡಿದೆ ಎಂದರು.

ವಿಜ್ಞಾನಿ ಡಾ ಎಸ್ ಶ್ರೀನಿವಾಸ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮದ, ಮಹಿಳೆಯರ, ಗೋವುಗಳ ರಕ್ಷಣೆಗೆ ಸ್ವಯಂ ಸೇವಕ ಸಂಘ ತನ್ನನು ತಾನು ತೊಡಗಿಸಿಕೊಂಡಿದೆ. ಬ್ರಿಟಿಷರ ಗುಲಾಮಿತನವನ್ನು ಸ್ವಾತಂತ್ರ್ಯಕ್ಕೆ ಮೊದಲು ಮತ್ತು ನಂತರ ಕೂಡ ಮೆಟ್ಟಿನಿಲ್ಲಲು ಅರಿವು ಮೂಡಿಸುತ್ತಾ ಬಂದಿರುವುದು ಸಹ ಇದರ ಹೆಗ್ಗಳಿಕೆಯಾಗಿದೆ. ಪಠ್ಯಪುಸ್ತಕಗಳಲ್ಲಿ ಇಲ್ಲದ ರಾಷ್ಟ್ರಕ್ಕೆ ನಿಜವಾದ ನಾಯಕರನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಕೂಡ ಸಂಘಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಪಠ್ಯ ಪುಸ್ತಕಗಳು ಮತ್ತು ಶಿಕ್ಷಣ ವಲಯದ ಇಡೀ ವ್ಯವಸ್ಥೆಯನ್ನು ವಾಸಹತು ಮನಸ್ಥಿತಿಯ ಮೆಕಾಲೆ ಪದ್ಧತಿಯೇ ಇಂದಿಗೂ ಆವರಿಸಿರುವುದು ದುರದೃಷ್ಟವಾಗಿದೆ. ಸ್ವಾತಂತ್ಯ ಬಂದ ನಂತರವೂ ನಮ್ಮ ಕಲೆ, ಸಂಸ್ಕೃತಿ ಮತ್ತು ನಿಜವಾದ ದೇಶದ ಮಹಾನಾಯಕರ ಕುರಿತು ಪರಿಚಯಿಸದೆ ವಿದೇಶಿ ಆಕ್ರಮಣಕಾರರನ್ನು ಎಡ ಪಂಥೀಯರು ವಿಜೃಂಭಿಸುವಂತೆ ಎಡ ಪಂಥೀಯ ಚಿಂತಕರು ನೋಡಿಕೊಂಡರು. ಸನಾತನ ಧರ್ಮವನ್ನು ಬಲಿಷ್ಠ ಮಾಡುವುದೊಂದೇ ಇದಕ್ಕೆಲ್ಲ ಪರಿಹಾರವಾಗಿದೆ. ಸಂಘ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೆ ಬಂದಿದೆಯಾದರೂ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕರಾದ ಶಿಕಾರಿಪುರ ಈಶ್ವರ್ ಭಟ್ ಮಾತನಾಡಿ, ಈ ಪುಸ್ತಕವನ್ನು ನಿಸ್ವಾರ್ಥ ಸೇವೆ ಮಾಡಿರುವ ಲಕ್ಷಾಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ದೇಶ ವಿದೇಶಗಳಲ್ಲಿ ಹಲವಾರು ಹೆಸರಿನಲ್ಲಿ ಸಂಘ ವಿಶ್ವದೆಲ್ಲೆಡೆ ತನ್ನ ಛಾಪನ್ನು ಮೂಡಿಸುತ್ತಾ ಬಂದಿದ್ದಾರೆ. ಸ್ವಯಂ ಸೇವೆಯೇ ನಿಜವಾದ ಧರ್ಮ ಎಂದು ಹಲವಾರು ನಿದರ್ಶನಗಳನ್ನು ನೀಡುತ್ತಾ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಿರತರರವಾಗಿ ಕಾರ್ಯಕರ್ತರು ನೆಡೆಸುತ್ತಾ ಬರುತ್ತಿದ್ದು, ಇದು ಅವರುಗಳನ್ನು ಪರಿಚಯಿಸುವ ಅಳಿಲು ಸೇವೆಯಾಗಿದೆ ಎಂದರು.


Share It

You cannot copy content of this page