News

ಬಸವಾದಿ ಶರಣರ ಕುರಿತ ಕೃತಿಗಳಿಗೆ 5 ಕೋಟಿ ದೇಣಿಗೆ: ಎಂ‌.ಬಿ ಪಾಟೀಲ್

Share It

ಬೆಂಗಳೂರು: ಬಸವಾದಿ ಶರಣರು ಮತ್ತು ಅನುಭವ ಮಂಟಪದಲ್ಲಿನ ಚಿಂತನೆಗಳನ್ನು ಕುರಿತು ಇಂಗ್ಲೀಷಿನಲ್ಲಿ ಜಾಗತಿಕ ಮಟ್ಟದ ಪುಸ್ತಕಗಳು ಹೊರಬರಬೇಕಾಗಿದೆ. ಇದಕ್ಕಾಗಿ ನಾನು 5 ಕೋಟಿ ರೂಪಾಯಿ ದೇಣಿಗೆ ಕೊಡಲಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ‌ ಸೋಮವಾರ ಏರ್ಪಡಿಸಿದ್ದ ರಮಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಸಾಧಕರಾದ ಫ.ಗು.ಹಳಕಟ್ಟಿ, ಸರ್ ಸಿದ್ದಪ್ಪ ಕಂಬಳಿ, ಲಿಂಗರಾಜ ದೇಸಾಯಿ, ಬಂತನಾಳದ ಪೂಜ್ಯರು, ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮುಂತಾದವರ ಬಗ್ಗೆ ಕೂಡ ನಮ್ಮಲ್ಲಿ ಪುಸ್ತಕಗಳು ಪ್ರಕಟವಾಗಬೇಕು. ಹಾಗೆಯೇ ಬೆಂಗಳೂರು ಭಾಗದ ಸರ್ ಪುಟ್ಟಣ್ಣ ಚೆಟ್ಟಿ ಅಂಥವರ ಬಗ್ಗೆಯೂ ತಿಳಿಯಬೇಕು. ಈ ಮೂಲಕ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎನ್ನುವ ಭೇದ ಅಳಿಯಬೇಕು ಎಂದು ಸಲಹೆ ನೀಡಿದರು.

ಫ.ಗು.ಹಳಕಟ್ಟಿ ಅವರು ಇಲ್ಲದೆ ಹೋಗಿದ್ದರೆ ಬಸವ ಧರ್ಮವಾಗಲಿ, ವಚನ ಸಾಹಿತ್ಯವಾಗಲಿ, ನೂರಾರು ವಚನಕಾರರಾಗಲಿ ಬೆಳಕಿಗೆ ಬರುತ್ತಿರಲಿಲ್ಲ. ಅವರು ಮತ್ತು ಬಂತನಾಳದ ಪೂಜ್ಯರು ಸರ್ವಸ್ವವನ್ನೂ ತ್ಯಾಗ ಮಾಡಿ ವಚನ ಯುಗದ ಬಗ್ಗೆ ಬೆಳಕು ಚೆಲ್ಲುವ ಮಹಾನ್ ಕೆಲಸ ಮಾಡಿಹೋಗಿದ್ದಾರೆ. ಹಳಕಟ್ಟಿ ಅವರು ಆರಂಭಿಸಿದ್ದ ‘ಶಿವಾನುಭವ’ ಪತ್ರಿಕೆಯನ್ನು ಸದ್ಯದಲ್ಲೇ ಪುನಾರಂಭ ಮಾಡಲಾಗುವುದು ಎಂದು ನುಡಿದರು.

ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯಲ್ಲಿನ‌ ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ವಚನ ಸಾಹಿತ್ಯ, ದಾಸ ಸಾಹಿತ್ಯ, ಆದಿಲ್ ಶಾಹಿ ಸಾಹಿತ್ಯ ಮತ್ತು ಎಂ.ಎಂ‌ ಕಲ್ಬುರ್ಗಿ ಅವರ ಸಾಹಿತ್ಯ ಸಂಪುಟಗಳನ್ನು ಈಗಾಗಲೇ ಹೊರತರಲಾಗಿದೆ. ಇವುಗಳನ್ನು ನಮ್ಮ ಯುವಜನ ಓದಬೇಕು ಎಂದು ಪಾಟೀಲ್ ಹೇಳಿದರು.

ಲೇಖಕ ಎಸ್.ಷಡಕ್ಷರಿ ಅವರ ಕ್ಷಣ ಹೊತ್ತು ಆಣಿಮುತ್ತು- ಭಾಗ 15 ಪುಸಕ್ತ ಕೂಡ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಸಾಹಿತಿ ಗೊ.ರು ಚನ್ನಬಸಪ್ಪ, ಲೇಖಕ ಎಸ್ ಷಡಕ್ಷರಿ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಶರಣ ಸಾಹಿತ್ಯ ಪರಿಷತ್ತಿನ ಸಿ.ಸೋಮಶೇಖರ್ ಉಪಸ್ಥಿತರಿದ್ದರು.


Share It

You cannot copy content of this page