ಬೆಂಗಳೂರು: ಮಾಧ್ಯಮ ಮತ್ತು ರಾಜಕಾರಣ ಎಂಬ ಎರಡು ಕಣ್ಣುಗಳು ಸತ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲವಾದರೆ ಸಮಾಜ ಕತ್ತಲೆಗೆ ಜಾರುತ್ತದೆ. ಇವುಗಳು ಜತೆ ಜತೆಯಾಗಿದ್ದರೆ ಸಮಾಜದಲ್ಲಿ ಶಾಂತಿ ಇರುತ್ತದೆ. ಆಗ ಮಾತ್ರ ಶುದ್ಧ ಭಾರತ ನಿರ್ಮಾಣ ಮಾಡಬಹುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್‌ಕ್ಲಬ್ ಸ್ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ -2025 ಹಾಗೂ ವಿಚಾರ ಸಂಕಿರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳ ಜವಾಬ್ದಾರಿ ಬಹು ದೊಡ್ಡದು. ಜನ ಸಾಮಾನ್ಯರಿಗೆ ತೊಂದರೆ ಬಂದಾಗ ಮಾಧ್ಯಮಗಳು ಮಾನವೀಯತೆ ಉಳಿಸುಕೊಂಡು ಹೋಗಬೇಕು. ದೇಶದ ಸಂಸೃತಿ, ಏಕತೆಯನ್ನು ಉಳಿಸಿಕೊಂಡು ಬಲಿಷ್ಠ ದೇಶ ನಿರ್ಮಿಸುವ ಜವಾಬ್ದಾರಿ ಸಹ ಮಾಧ್ಯಮಗಳ ಮೇಲಿದೆ ಎಂದು ಹೇಳಿದರು.
ಮಾಧ್ಯಮಗಳು ರಾಜಕಾರಿಣಿಗಳನ್ನು ಹೊಗಳಿ ಸುದ್ದಿ ಬಿತ್ತರಿಸಿದಾಗಲೂ ತಮ್ಮ ಚಟುವಟಿಕೆಗಳಲ್ಲಿ ನಿರತರಾಗಬೇಕು. ರಾಜಕಾರಿಣಿಗಳ ಬಗ್ಗೆ ಆರೋಪ ಮಾಡಿ ಸುದ್ದಿ ಮಾಡಿದಾಗಲೂ ತಪ್ಪನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು. ನಮ್ಮ ಬಗ್ಗೆ ಒಳ್ಳೆಯದ್ದನ್ನೇ ಬರೆಯುತ್ತ ಹೋದರೆ ಅದು ಮಾಧ್ಯಮ ಎಂದು ಅನ್ನಿಸಿಕೊಳ್ಳಬೇಕಿಲ್ಲ. ಮುಖ್ಯವಾಗಿ ಜನರಿಗೆ ವಿಶ್ವಾಸ ಬರುವಂತೆ ಪತ್ರಿಕೋದ್ಯಮ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಎನ್‌ಡಿಟಿವಿ ನಿವೃತ್ತ ಸಂಪಾದಕಿ ನೂಪುರ್ ಬಸು ಮಾತನಾಡಿ, ಸುಳ್ಳು ಸುದ್ದಿಗಳ ಪ್ರಮಾಣ ಹೆಚ್ಚಾದಲ್ಲಿ ಜನರು ಮಧುಮಗಳ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಹೀಗಾಗುವುದು ತರವಲ್ಲ. ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪತ್ರಕರ್ತರ ಮೇಲೆ ದಾಳಿಗಳಾಗುತ್ತಿವೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಕ್ರಮಕೈಗೊಳ್ಳಬೇಕು ಎಂದರು.
ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಸತ್ಯವಾದ ಸುದ್ದಿಯನ್ನು ಜನರ ಮುಂದಿಡಲು ಹಿಂಜರಿಯಬಾರದು. ಸುಳ್ಳು ಸುದ್ದಿಗಳಿಂದ ರಕ್ಷಿಸುವ ಹೊಣೆ ನಿಜವಾದ ಪತ್ರಕರ್ತನ ಕೆಲಸ ಎಂದು ತಿಳಿಸಿದರು.
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಭಾರತ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರವಾಗಿದೆ. ಮಾಧ್ಯಮ ಕ್ಷೇತ್ರಕ್ಕೆ ನಮ್ಮ ಸಂವಿಧಾನದಲ್ಲಿ ಒಂದು ವಿಶೇಷವಾದ ಸ್ಥಾನವಿದೆ. ಸ್ವತಂತ್ರ ಮಧ್ಯಮವಿಲ್ಲದೆ ಪ್ರಜಾಪ್ರಭುತ್ವವಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರೆಸ್‌ಕ್ಲಬ್ ಆಫ್ ಬೆಂಗಳೂರಿನ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಸಹನಾ ಎಂ. ಸೇರಿದಂತೆ ಇತರರಿದ್ದರು.

