ಬೆಂಗಳೂರು: ಕೆಲಸದ ವೇಳೆ ವ್ಯಕ್ತಿ ಅಪಘಾತದಿಂದ ಸಾವು-ನೋವಿಗೆ ತುತ್ತಾದರೆ, ಸಂತ್ರಸ್ತ ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿದ್ದರೂ, ಆತನಿಗೆ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಪ್ರಮಾಣ ಪರಿಗಣಿಸಿಯೇ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಾಹನ ಅಪಘಾತದಲ್ಲಿ ಎಡಗಣ್ಣು ಕಳೆದುಕೊಂಡಿರುವುದಕ್ಕೆ ಹೆಚ್ಚಿನ ಪರಿಹಾರ ಕೋರಿ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ನಿವಾಸಿ ನಾಗೇಂದ್ರ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ಮೈಸೂರಿನ ಎಚ್.ಡಿ ಕೋಟೆ ನಿವಾಸಿ ನಾಗೇಂದ್ರ ಎಂಬುವರು ಮಹದೇವಪ್ಪ ಎಂಬುವರ ಬಳಿ ಜೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. 2011ರ ಮೇ 1ರಂದು ನಾಗೇಂದ್ರ ಚಲಾಯಿಸುತ್ತಿದ್ದ ಜೀಪ್‌ಗೆ ಮತ್ತೊಂದು ವಾಹನ ಡಿಕ್ಕಿಯಾಗಿ ಎಡಗಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಬಳಿಕ ಉದ್ಯೋಗವನ್ನೂ ಕಳೆದುಕೊಂಡಿದ್ದರು. ನಂತರ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ಅರ್ಜಿದಾರ ಎಡಗಣ್ಣಿನ ದೃಷ್ಟಿ ಕಳೆದುಕೊಂಡು ಉದ್ಯೋಗ ವಂಚಿತನಾಗುವ ಮೂಲಕ ಶೇ.100ರಷ್ಟುಆದಾಯ ಸಂಪಾದನೆ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂದು ತೀರ್ಮಾನಿಸಿತ್ತು. ಅಲ್ಲದೇ ಸಂತ್ರಸ್ತನಿಗೆ ಒಟ್ಟು 7,88,423 ಪರಿಹಾರ ಘೋಷಿಸಿತ್ತು. ಈ ಆದೇಶ ರದ್ದು ಕೋರಿ ವಿಮಾ ಕಂಪನಿ ಮತ್ತು ಪರಿಹಾರ ಮೊತ್ತ ಹೆಚ್ಚಳ ಕೋರಿ ನಾಗೇಂದ್ರ ಹೈಕೋರ್ಟ್ ಗೆ ಪ್ರತ್ಯೇಕ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದರು.
ಹೈಕೋರ್ಟ್ ತೀರ್ಪು: ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಜೀಪ್ ಚಾಲಕ ನಾಗೇಂದ್ರ 2011ರಲ್ಲಿ ಅಪಘಾತಕ್ಕೆ ಗುರಿಯಾಗಿ ಎಡಗಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಪರಿಣಾಮ ಅವರು ಚಾಲನಾ ವೃತ್ತಿ ಮುಂದುವರಿಸಲು ಆಗದೆ ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ, ಸಂತ್ರಸ್ತ ನಾಗೇಂದ್ರ ಶೇ.100ರಷ್ಟುಆದಾಯ ಸಂಪಾದನೆ ಸಾಮರ್ಥ್ಯ ಕಳೆದುಕೊಡಿದ್ದಾರೆ ಎಂದೇ ಪರಿಗಣಿಸಬೇಕಿದೆ.
ಅಪಘಾತ ಸಂಭವಿಸಿದಾಗ ಅವರಿಗೆ 25 ವರ್ಷವಿದ್ದು, ಮಾಸಿಕ ವೇತನ 6 ಸಾವಿರ ರೂಪಾಯಿ ಇತ್ತು ಎಂದಿದ್ದಾರೆ. ಆದರೆ, 2010ರಲ್ಲಿ ಕೇಂದ್ರ ಸರ್ಕಾರ ಕನಿಷ್ಠ ವೇತನವನ್ನು 4 ಸಾವಿರದಿಂದ 8 ಸಾವಿರ ರೂಪಾಯಿಗೆ ನಿಗದಿಪಡಿಸಿರುವುದರಿಂದ ಆದನ್ನು ಆಧರಿಸಿಯೇ ಪ್ರಕರಣದಲ್ಲಿ ಪರಿಹಾರ ನಿಗದಿಪಡಿಸಬೇಕಿದೆ ಎಂದು ಅಭಿಪ್ರಾಯಪಟ್ಟು, ಪರಿಹಾರ ಮೊತ್ತವನ್ನು 10,41,168 ರು.ಗೆ ಹೆಚ್ಚಿಸಿ ಆದೇಶಿಸಿದೆ.
ಅಲ್ಲದೆ, ಪರಿಹಾರ ಕ್ಲೇಮು ಮಾಡುವಾಗ ಅಪಘಾತ ಸಂಭವಿಸಿದ ವೇಳೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಪ್ರಮಾಣಕ್ಕಿಂತ ಕಡಿಮೆ ವೇತನ ಇತ್ತು ಎಂದು ಬಾಧಿತರು ತಿಳಿಸಿದ್ದರೂ, ಪರಿಹಾರ ನಿಗದಿಗೆ ಕನಿಷ್ಠ ವೇತನ ಪ್ರಮಾಣವನ್ನೇ ಪರಿಗಣಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
(MFA 8801/2018)

