ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡವರಿಗೆ ಯಾವುದೇ ರಕ್ಷಣೆ ನೀಡಲಾಗದು ಎಂದು ಸುಪ್ರೀಂಕೋರ್ಟ್ ಪುನರುಚ್ಚರಿಸಿದೆ.
ಜಾತಿ ಪ್ರಮಾಣಪತ್ರವನ್ನು ಮೋಸದಿಂದ ಪಡೆದು ಸಲ್ಲಿಸಲಾಗಿದೆಯೇ ಅಥವಾ ನಿಜವಾದ ತಪ್ಪು ಗ್ರಹಿಕೆಯಿಂದ ಪಡೆದು ಸಲ್ಲಿಸಲಾಗಿದೆಯೇ ಎಂಬುದು ಇಲ್ಲಿ ನಗಣ್ಯವಾಗುತ್ತದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.
ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಉದ್ಯೋಗ ಪಡೆದಿದ್ದ ಮಧುಮಿತಾ ದಾಸ್ ಎಂಬುವರನ್ನು ಉದ್ಯೋಗದಲ್ಲಿ ಮುಂದುವರೆಸುವಂತೆ ಒರಿಸ್ಸಾ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಭುವನೇಶ್ವರ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಮೀಸಲು ಹುದ್ದೆಗಳನ್ನು ಅರ್ಹರಿಗೆ ಮಾತ್ರವೇ ನೀಡಬೇಕಾಗುತ್ತದೆ. ಒಂದೊಮ್ಮೆ ಅನರ್ಹ ವ್ಯಕ್ತಿಗೆ ನೀಡಿದರೆ ಅರ್ಹ ವ್ಯಕ್ತಿಯ ಅವಕಾಶವನ್ನು ಕಸಿದುಕೊಂಡಂತಾಗುತ್ತದೆ. ತದನಂತರವೂ ರಕ್ಷಣೆ ನೀಡಿದರೆ ಅಕ್ರಮವನ್ನು ಶಾಶ್ವತಗೊಳಿಸಿದಂತಾಗುತ್ತದೆ. ಮುಖ್ಯವಾಗಿ ಅನರ್ಹರಿಗೆ ರಕ್ಷಣೆ ನೀಡುವುದು ಉತ್ತಮ ಆಡಳಿತದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ನೌಕರಿ ಪಡೆದವರಿಗೆ ಯಾವುದೇ ರಕ್ಷಣೆ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಹುಟ್ಟಿನಿಂದ ಮೇಲ್ವರ್ಗಕ್ಕೆ ಸೇರಿದ ಮಧುಮಿತಾ ದಾಸ್ ಎಸ್ಸಿ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದರು. ಬಳಿಕ ತನಗೂ ಪರಿಶಿಷ್ಟ ಜಾತಿ ಅನ್ವಯಿಸುತ್ತದೆ ಎಂದು ತಹಶಿಲ್ದಾರರಿಂದ ಎಸ್ಸಿ ಜಾತಿ ಪ್ರಮಾಣಪತ್ರ ಪಡೆದುಕೊಂಡು, ಭುವನೇಶ್ವರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಸ್ಸಿ ಸಮುದಾಯಕ್ಕೆ ಮೀಸಲಿಟ್ಟ ಹುದ್ದೆ ಪಡೆದಿದ್ದರು.
2011ರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದ ಕುರಿತಂತೆ ವಿಚಾರಣೆ ನಡೆಸಿದ ಶಿಸ್ತು ಪ್ರಾಧಿಕಾರವು 2012 ರಲ್ಲಿ ಮಧುಮಿತಾರನ್ನು ಸೇವೆಯಿಂದ ವಜಾ ಮಾಡಿತ್ತು. ಜತೆಗೆ ಅವರಿಗೆ ಪಾವತಿಸಿದ್ದ ವೇತನ ಹಿಂದಿರುಗಿಸುವಂತೆಯೂ ಆದೇಶಿಸಿತ್ತು. ಈ ನಡುವೆ ತಹಶಿಲ್ದಾರ್ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದರು.
ಶಿಸ್ತು ಪ್ರಾಧಿಕಾರ ತಮ್ಮನ್ನು ಸೇವೆಯಿಂದ ವಜಾ ಮಾಡಿದ ಕ್ರಮ ಪ್ರಶ್ನಿಸಿ ಮಧುಮಿತಾ ದಾಸ್ ಒರಿಸ್ಸಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರು ಸುಳ್ಳು ಜಾತಿ ಪ್ರಮಾಣಪತ್ರವನ್ನು ಮೋಸದಿಂದ ಪಡೆದಿಲ್ಲ. ಹೀಗಾಗಿ ಹುದ್ದೆ ಖಾಲಿ ಇದ್ದರೆ ಮುಂದುವರೆಸುವ ಕುರಿತು ಪರಿಶೀಲಿಸಬೇಕು ಎಂದು ಪ್ರಾಧಿಕಾರಕ್ಕೆ ಆದೇಶಿಸಿತ್ತು.
ಹೈಕೋರ್ಟ್ ಆದೇಶ ಒಪ್ಪದ ಭುವನೇಶ್ವರ ಅಭಿವೃದ್ಧಿ ಪ್ರಾಧಿಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
(Civil Appeal No. 3320 of 2023)

